ಕಲುಷಿತ ನೀರು ಸೇವನೆ ಪ್ರಕರಣ: ಘಟನೆ ನಡದು ಒಂದು ತಿಂಗಳ ಬಳಿಕ ಕವಾಡಿಗರಹಟ್ಟಿಗೆ ಭೇಟಿ ನೀಡಿದ ಸಚಿವ ಎಚ್.ಸಿ.ಮಹದೇವಪ್ಪ
ಚಿತ್ರದುರ್ಗ, ಸೆಪ್ಟೆಂಬರ್, 04: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿದ್ದರು. ಇನ್ನು ಈ ಘಟನೆ ನಡೆದು ಒಂದು ತಿಂಗಳ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್. ಸಿ. ಮಹದೇವಪ್ಪ ಕವಾಡಿಗರಹಟ್ಟಿಗೆ ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ಹಾಗೂ ಯೋಗ ಕ್ಷೇಮ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲುಷಿತ ನೀರು ದುರಂತದಲ್ಲಿ ಐದು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಇಲ್ಲಿ ಶುಚಿತ್ವ, ಶುದ್ಧ ನೀರು ಪೂರೈಕೆ ಕಾಪಾಡುವಲ್ಲಿ ನಗರಾಡಳಿತ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಲ್ಲಿ ನಮ್ಮ ಶಾಸಕರು ಹಾಗೂ ನಾಯಕರು ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಇಲ್ಲಿನ ಡಿಸಿ ಹಾಗೂ ಎಸ್ಪಿ ಅವರಿಗೆ ಸಮಾಜಕಲ್ಯಾಣ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೆವು. ಅದರಂತೆಯೇ ಸೂಕ್ತ ಕ್ರಮ ಕೈಗೊಂಡಿದ್ದೇವೆ, ವರದಿ ಪ್ರಕಾರ ಇದಕ್ಕೆ ವಿಜ್ರಯೋ ಕಾಲರಾ ಕಾರಣ ಅಂತಾ ತಿಳಿಸಿದೆ ಎಂದು ಹೇಳಿದರು.
ಕಲುಷಿತ ನೀರು ಕುಡಿಯುವ ನೀರಿಗೆ ಬೆರೆತು ಆಗಿರಬಹುದು. ಈ ಕುರಿತ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರಕರಣದಲ್ಲಿ ಸಿಲುಕಿರುವ 400 ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಫುಡ್ ಕಿಟ್ ವಿತರಿಸಿದ್ದೇವೆ. ಇಲ್ಲಿ ವಾಸಿಸುವ ಜನರ ಜಾಗಗಳಿಗೆ ಇನ್ನೂ ಖಾತೆಯಾಗಿಲ್ಲ. ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಜಮೀನು ನೋಡೋಕೆ ನಗರಾಡಳಿತಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಇಲ್ಲಿನ ಜನರ ಬೇಡಿಕೆ ಈಡೇರಿಸಲು ನಾನು ಡಿಸಿ ಅವರಿಗೆ ಸೂಚನೆ ನೀಡಿದ್ದೇನೆ. ನಗರಾಡಳಿತದಿಂದ 3 ಕೋಟಿ ರೂಪಾಯಿ ಕೊಡಿ ಅಂತಾ ಹೇಳಿದ್ದಾರೆ. ಈ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆಯಿಂದ 1 ಕೋಟಿ 3 ಲಕ್ಷ ಕೊಡೋಕೆ ಹೇಳಲಾಗಿದೆ. ಸಿಎಂ ಜೊತೆ ಮಾತನಾಡಿ ಇಲ್ಲಿನ ಜನರಿಗೆ ಮೂಲ ಸೌಕರ್ಯ ಬದಗಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಗೆಯೇ ಈ ಭಾಗದ ನಿವಾಸಿಗಳಿಗೆ ಜಾಗ ಕೊಡುವ ಮೂಲಕ ವ್ಯವಸ್ಥಿತ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈಶ್ವರಪ್ಪ ವಿರುದ್ಧ ವಾಗ್ದಾಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಸ್ವಾಭಾವಿಕ ನಾಯಕ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಾಸ್ ಲೀಡರ್ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಈಗಿರುವಾಗ ಮಾಜಿ ಸಚಿವ ಈಶ್ವರಪ್ಪ ಅವರು ಪದೇ ಪದೇ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಾರೆ. ಅವರ ನಾಲಿಗೆ ಮತ್ತು ಮೆದುಳಿಗೆ ಕನೆಕ್ಷನ್ ಎಂದು ಹೇಳುವುದು ಸರಿಯಲ್ಲ. ಸೋಲಿನಿಂದ ಹತಾಶರಾಗಿರುವ ಈಶ್ವರಪ್ಪ ಅವರನ್ನು ಯಾರು ಕ್ಯಾರೇ ಅನ್ನುವುದಿಲ್ಲ. ಆದ್ದರಿಂದ ಹೀಗೆ ಬಾಯಿಗೆ ಬಂದಂತೆ ಮಾತಾಡುತ್ತಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಇನ್ನು ಸೋಲಿನಿಂದ ಹತಾಶರಾಗಿರುವ ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಲ್ಲಿ ಯಾರು ಕ್ಯಾರೇ ಎನ್ನುತ್ತಿಲ್ಲ ಎಂದು ಕಿಡಿ ಕಾರಿದರು. ಸಿಎಂ ಸಿದ್ದರಾಮಯ್ಯ ಅವರು ನುಡಿದಂತೆ ನಡೆದು, ತನ್ನ ಸಾಮರ್ಥ್ಯ ಏನು ಎಂದು ತೋರಿಸಿದ್ದಾರೆ. ಇವರ ನಾಯಕತ್ವದ ಮೇಲೆ ಇಡೀ ರಾಜ್ಯದ ಜನರು ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಟೆಸ್ಟ್ ಡ್ ಲೀಡರ್ ಎಂದು ತಿಳಿಸಿದರು.












Click it and Unblock the Notifications