ಮುರುಘಾ ಮಠದಿಂದ ಸಿಎಂ ಬೊಮ್ಮಾಯಿಗೆ ಬಸವ ಭೂಷಣ, ಯಡಿಯೂರಪ್ಪಗೆ ಶರಣಶ್ರೀ ಪ್ರಶಸ್ತಿ
ಚಿತ್ರದುರ್ಗ, ಅಕ್ಟೋಬರ್ 1: ಚಿತ್ರದುರ್ಗದ ಮುರುಘಾ ಮಠವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು 'ಬಸವಭೂಷಣ' ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಯವರನ್ನು 'ಶರಣಶ್ರೀ' ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು. ಅಕ್ಟೋಬರ್ 18ರಂದು ಚಿತ್ರದುರ್ಗದ ಮುರುಘಾ ಮಠದಲ್ಲಿಯೇ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಐವರಿಗೆ ಮುರುಘಾಶ್ರೀ ಪ್ರಶಸ್ತಿ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರನ್ನು 'ಮುರುಘಾಶ್ರೀ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆರೋಗ್ಯ ಪೂರ್ಣ ಸಮಾಜಕ್ಕಾಗಿ ಶ್ರಮಿಸುತ್ತಿರುವ ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಸಮಾಜಮುಖಿ ಚಿಂತಕ ಮತ್ತು ಶಿಕಾರಿಪುರ ಜುಬೇದ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಅಮ್ಜದ್ ಹುಸೇನ್, ದೇಶಿ ಪದಶಕ್ತಿಯ ಶಬ್ಧ ಗಾರುಡಿಗ ಯುಗಧರ್ಮ ರಾಮಣ್ಣ, ಪತ್ರಕರ್ತ ರವೀಂದ್ರ ಭಟ್ಟ, ಅಖಿಲ ಭಾರತ ವೀರಶೈವ ಮಹಾಸಭಾದ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಎಸ್. ನಾಗರತಿನಂ ಅವರಿಗೆ 'ಮುರುಘಾಶ್ರೀ' ಪ್ರಶಸ್ತಿ ನೀಡಲಾಗುತ್ತಿದೆ ಎಂದು ವಿವರಿಸಿದರು. ಈ ಪ್ರಶಸ್ತಿಯು 25,000 ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಇಬ್ಬರಿಗೆ 'ಬಸವಶ್ರೀ'
ಇನ್ನು ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್‌ರನ್ನು 2019ನೇ ಸಾಲಿಗೆ ಮತ್ತು ಬಾಹ್ಯಾಕಾಶ ವಿಜ್ಞಾನಿ ಕೆ. ಕಸ್ತೂರಿ ರಂಗನ್‌ರನ್ನು 2020ನೇ ಸಾಲಿನ 'ಬಸವಶ್ರೀ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ 5 ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾಹಿತಿ ನೀಡಿದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಳು ರೆಕಾರ್ಡ್ ವಿಶ್ವದಾಖಲೆ ಮಾಡಿರುವ ಉಡುಪಿಯ ತನುಶ್ರೀ ಅವರನ್ನು ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 25,000 ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ ಎಂದು ಮುರುಘಾ ಶರಣರು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.












Click it and Unblock the Notifications