ಚಿತ್ರದುರ್ಗದಲ್ಲಿ ಅಸ್ಥಿಪಂಜರಗಳ ಪತ್ತೆ ಕೇಸ್: ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ಇಬ್ಬರು ವ್ಯಕ್ತಿಗಳ್ಯಾರು..?
ಚಿತ್ರದುರ್ಗ, ಡಿಸೆಂಬರ್ 30 : ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಕಾರಾಗೃಹ ಬಳಿ ಸಮೀಪದ ಪಾಳು ಬಿದ್ದ ಮನೆಯೊಂದರಲ್ಲಿ ಐದು ಅಸ್ಥಿಪಂಜರ ಪ್ರಕರಣ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಇದೀಗ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಐವರ ಸಾವಿಗೆ ಆ ಇಬ್ಬರು ವ್ಯಕ್ತಿಗಳು ಕಾರಣರಾದರಾ ಎಂಬ ಪ್ರಶ್ನೆ ಕಾಣತೊಡಗಿದೆ.
ಪ್ರಕರಣವನ್ನು ಬೆನ್ನು ಬಿದ್ದ ಜಿಲ್ಲೆಯ ಪೊಲೀಸರಿಗೆ ಇದೀಗ ಪ್ರಕರಣವನ್ನು ಭೇದಿಸಲು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾಳು ಬಿದ್ದ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಡೆತ್ ನೋಟ್ ಸಿಕ್ಕಿರುವ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿ ಅಲ್ಲಗಳೆದಿದ್ದರು, ಇದೀಗ ಸಾವಿಗೆ ಡೆತ್‌ನೋಟ್‌ನಲ್ಲಿ ಇಬ್ಬರು ವ್ಯಕ್ತಿಗಳ ಹೆಸರನ್ನು ಕುಟುಂಬ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಸಿಕ್ಕಿರುವ ಆತ್ಮಹತ್ಯೆ ಪತ್ರದಲ್ಲಿ ಇಬ್ಬರು ವ್ಯಕ್ತಿಗಳು ನೀಡುತ್ತಿರುವ ಚಿತ್ರಹಿಂಸೆಯಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಉಲ್ಲೇಖಿಸಿದ್ದು ಆ ಇಬ್ಬರು ವ್ಯಕ್ತಿಗಳು ಎಲ್ಲಿಯವರು ಎಂಬ ಹುಡುಕಾಟ ಶುರುವಾಗಿದೆ.

ಚಿತ್ರದುರ್ಗದ ಓರ್ವ ವ್ಯಕ್ತಿ ಹಾಗೂ ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ಓರ್ವ ವ್ಯಕ್ತಿ ಎಂಬ ಶಂಕೆ ವ್ಯಕ್ತವಾಗಿದ್ದು, ಹೆಸರು ಮಾತ್ರ ಬಹಿರಂಗವಾಗಿಲ್ಲ. ಜಮೀನು ಪ್ರಕರಣದ ವಿಚಾರಣೆ ವೇಳೆ ಇಬ್ಬರು ವ್ಯಕ್ತಿಗಳು ನಮಗೆ ಹಿಂಸೆ ನೀಡುತ್ತಿದ್ದಾರೆ. ಅವರಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಡೆತ್ ನೋಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ವ್ಯಕ್ತಿಗಳ ಹೆಸರನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಅಲ್ಲದೇ ಡೆತ್‌ನೋಟ್‌ನಲ್ಲಿಯೂ ಸಾಕಷ್ಟು ಅನುಮಾನಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಇಬ್ಬರ ವ್ಯಕ್ತಿಗಳ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗುರುವಾರ ರಾತ್ರಿ 9 ಗಂಟೆ ವೇಳೆಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವಗಳಿವೆ ಎಂಬ ಸುದ್ದಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲು ತೆರೆದಾಗ ಮನೆಯ ಪ್ರತಿ ಕೋಣೆಯಲ್ಲೂ ಮೃತಪಟ್ಟ ವ್ಯಕ್ತಿಗಳ ಅಸ್ಥಿಪಂಜರಗಳು ಕಂಡುಬಂದಿದ್ದವು. ಈ ಹಿಂದೆ ಈ ಮನೆಯಲ್ಲಿ ನಿವೃತ್ತ ಎಂಜಿನಿಯರ್ ಜಗನ್ನಾಥ ರೆಡ್ಡಿ (70), ಪತ್ನಿ ಪ್ರೇಮಾವತಿ (60), ಮಗಳು ತ್ರಿವೇಣಿ (42), ಮಗ ಪುತ್ರರಾದ ಕೃಷ್ಣಾ ರೆಡ್ಡಿ (40) ಹಾಗೂ ನರೇಂದ್ರ ರೆಡ್ಡಿ (38) ಎಂಬುವವರು ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಜಗನ್ನಾಥ ರೆಡ್ಡಿ ಅವರಿಗೆ ಮೂವರು ಗಂಡು ಮಕ್ಕಳು, ಒರ್ವ ಪುತ್ರಿ ಇದ್ದರು. ಯಾರಿಗೂ ಮದುವೆ ಆಗಿರಲಿಲ್ಲ ಎನ್ನಲಾಗಿದ್ದು , ಹಿರಿಯ ಮಗ ಮಂಜುನಾಥ ರೆಡ್ಡಿ ಎಂಬುವವರು ಈ ಹಿಂದೆಯೇ ಮೃತಪಟ್ಟಿದ್ದರು ಎನ್ನುತ್ತಾರೆ ಸಂಬಂಧಿಕರು.
ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪುತ್ರ
ಜಗನ್ನಾಥ ರೆಡ್ಡಿ ಅವರ ಪುತ್ರ ನರೇಂದ್ರ ರೆಡ್ಡಿ ವಿರುದ್ಧ ಬೆಂಗಳೂರಿನ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ನರೇಂದ್ರ ರೆಡ್ಡಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ. ಸ್ನೇಹಿತರ ಜೊತೆಗೂಡಿ ಬಿಡದಿ ಸಮೀಪ ವಾಹನ ತಡೆದು ದರೋಡೆ ಮಾಡಿ ಕೆಲವು ದಿನ ಜೈಲುಪಾಲಾಗಿದ್ದ. ಈ ಕೇಸ್‌ನಿಂದ ಜಗನ್ನಾಥ ರೆಡ್ಡಿ ಕುಟುಂಬ ಮಾನಸಿಕವಾಗಿ ಕುಗ್ಗಿಹೋಗಿತ್ತು. ಇದರಿಂದ ನೊಂದ ಕುಟುಂಬ 2019ರಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿತ್ತು .

ನಾಯಿ ಅಸ್ಥಿಪಂಜರ ಪತ್ತೆ
ಪಾಳು ಬಿದ್ದಿರುವ ಮನೆಯಲ್ಲಿ 5 ಮಾನವ ಅಸ್ಥಿಪಂಜರಗಳ ಜೊತೆಗೆ ನಾಯಿಯ ಅಸ್ಥಿ ಪಂಜರವು ಪತ್ತೆಯಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರ ನಿವಾಸದಲ್ಲಿ ಐವರು ಆತ್ಮಹತ್ಯೆ ಮಾಡಿಕೊಂಡ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಇವರೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವಿಷ ಸೇವಿಸಿ ಅಥವಾ ಊಟದಲ್ಲಿ ವಿಷ ಬೆರೆಸಿಕೊಂಡು ಊಟ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದ್ದು, ಮನೆಯಲ್ಲಿ ಸಾಕಿದ್ದ ನಾಯಿಗೂ ಸಹ ವಿಷ ಹಾಕಿರಬಹುದು ಈ ಹಿನ್ನೆಲೆಯಲ್ಲಿ ನಾಯಿಯು ಮೃತಪಟ್ಟಿದ್ದು ಅದರ ಅಸ್ಥಿ ಪಂಜರವು ಪತ್ತೆಯಾಗಿದೆ.












Click it and Unblock the Notifications