Chitradurga murugha mutt: ಮುರುಘಾ ಶ್ರೀಗಳಿಗೆ ಮಠದ ಅಧಿಕಾರ ಹಸ್ತಾಂತರ
ಚಿತ್ರದುರ್ಗ, ಡಿಸೆಂಬರ್, 08: ನಗರದ ಪ್ರತಿಷ್ಠಿತ ಮುರುಘಾ ಮಠದ ಅಧಿಕಾರ ಮತ್ತೆ ಶಿವಮೂರ್ತಿ ಮುರುಘಾ ಶರಣರಿಗೆ ದೊರೆತಿದೆ. ಇಷ್ಟು ದಿನ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರು ಮಠದ ಆಡಳಿತಾಧಿಕಾರಿ ಆಗಿದ್ದರು. ನವೆಂಬರ್ 16ರಂದು ಜಾಮೀನಿನ ಮೇಲೆ ಮುರುಘಾಶ್ರೀ ಬಿಡುಗಡೆ ಆಗಿದ್ದ ಹಿನ್ನಲೆ ಮಠದ ಆಧಿಕಾರ ಹಿಂದಿರುಗಿಸುವಂತೆ ಮುರುಘಾಶ್ರೀಗಳು ಕೋರ್ಟ್ ಮೊರೆ ಹೋಗಿದ್ದರು. ಹಾಗಾದರೆ ಮುಂದಾಗಿದ್ದೇನು ಎನ್ನುವ ಮಾಹಿತಿ ಇಲ್ಲಿದೆ ಗಮನಿಸಿ.
ನಗರದ ಪ್ರತಿಷ್ಠಿತ ಮುರುಘಾ ಮಠದ ಆಡಳಿತಕಾರಿಯಾಗಿದ್ದ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರು ಇದೇ ಡಿಸೆಂಬರ್ 05ರಿಂದ ಮುರುಘಾ ಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತವನ್ನು ಮುರುಘಾಮಠದ ಪೀಠಾಧಿಪತಿಗಳು ಮತ್ತು ಎಸ್.ಜೆ.ಎಂ ವಿದ್ಯಾಪೀಠದ ಮುರುಘಾ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸಿರುತ್ತಾರೆ ಎಂದು ಎಸ್.ಜೆ.ಎಂ ವಿದ್ಯಾಪೀಠದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಕಟಣೆಯಲ್ಲಿ ಏನಿದೆ?
ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಪೋಕ್ಸೊ ಪ್ರಕರಣದಲ್ಲಿ 2022ರ ಸೆಪ್ಟಂಬರ್ 1ರಂದು ಬಂಧನವಾಗಿತ್ತು. (ಇದೀಗ ನಿರೀಕ್ಷಣಾ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ). ಮಠದ ಆಡಳಿತ ದೃಷ್ಟಿಯಿಂದ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು.
ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಆಡಳಿತಾಧಿಕಾರಿ ನೇಮಕವನ್ನು ರದ್ದುಪಡಿಸಿ, 'ಮಠಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು' ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು. ಮತ್ತು ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ಮಠದ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಿತ್ತು.
ಪ್ರಸ್ತುತ ಮುರುಘಾಮಠದ ಆಡಳಿತಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಕೆ.ಬಿ. ಗೀತಾ ಅವರು ಮುರುಘಾಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತವನ್ನು ಮುರುಘಾಮಠದ ಪೀಠಾಧಿಪತಿಗಳು ಮತ್ತು ಎಸ್.ಎಂ ವಿದ್ಯಾಪೀಠದ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ.












Click it and Unblock the Notifications