ಬಿಎಸ್‌ವೈ ಹಾಗೂ "ಆ" ಮಹಾನ್ ನಾಯಕನಿಂದಲೇ ಮಗನಿಗೆ ಚಿತ್ರದುರ್ಗ ಬಿಜೆಪಿ ಟಿಕೆಟ್ ತಪ್ಪಿತು: ಹೊಳಲ್ಕೆರೆ ಶಾಸಕ
ಚಿತ್ರದುರ್ಗ, ಮಾರ್ಚ್, 28: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದಲೇ ನನ್ನ ಮಗನಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ನಮ್ಮ ವಿಚಾರದಲ್ಲಿ ಒಳಗೊಳಗೆ ಆಟವಾಡಿದ್ದಾರೆ. ಇದು ತೀವ್ರ ಬೇಸರ ತಂದಿದೆ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಕಿಡಿಕಾರಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಮಧ್ಯಾಹ್ನದವರೆಗೂ ನನ್ನ ಮಗನ ಹೆಸರು ಫೈನಲ್ ಆಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ನನ್ನ ಮಗನ ಹೆಸರು ಇಲ್ಲದೆ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇತ್ತ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿಲ್ಲ ಅಂದ್ರೆ ಕ್ಯಾಂಪೇನ್ ಮಾಡಲ್ಲ ಎಂದಿದ್ದಾರೆ. ಯಡಿಯೂರಪ್ಪ ಹೈಕಮಾಂಡ್‌ಗೆ ಹೀಗೆ ಹೇಳಿದ್ದಕ್ಕೆ ನನ್ನ ಮಗನಿಗೆ ಟಿಕೆಟ್ ಮಿಸ್ ಆಗಿದೆ ಎಂದು ಶಾಸಕ ಚಂದ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಮಗನಿಗೆ 2019ರಲ್ಲಿ ಟಿಕೇಟ್ ಕೇಳಿದ್ದೆ, ಆಗ ಮುಂದಿನ ಬಾರಿ ಎಂದು ಹೇಳಿದ್ದರು. ನಾರಾಯಣ ಸ್ವಾಮಿ ಪರ ಕಳೆದ ಬಾರಿ 40 ಸಾವಿರ ಲೀಡ್ ಕೊಟ್ಟಿದ್ದೆ. 2024ರ ಎಲೆಕ್ಷನ್‌ನಲ್ಲಿ ಟಿಕೆಟ್ ಕೊಡುತ್ತೇವೆ ಎಂದ ಸಂತೋಷ್ ಜೀ ಕೂಡಾ ಹೇಳಿದ್ದರು. ಇದೇ ಗೋವಿಂದ ಕಾರಜೋಳ ನನ್ನ ಮಗನ ಓಡಾಡಲು ಹೇಳಿದ್ದರು. ಆದರೆ ಅವರು ಓಡಾಡಿದ್ದು ನೋವಾಗಿದೆ ಎಂದರು.
ಪಾರ್ಟಿ ಸಭೆಯಲ್ಲಿ ಕೂಡಾ ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾಗಿ ದ್ವನಿ ಎತ್ತಿದ್ದೆ. ಸರ್ವೆ ಬಂದವರಿಗೆ ನಮ್ಮ ಜಿಲ್ಲೆಯವರಿಗೆ ಟಿಕೆಟ್ ನೀಡಿ ಎಂದಿದ್ದೆ. ಮೋದಿ, ಅಮೀತ್ ಷಾ ಸರ್ವೆಯಲ್ಲಿ ರಘುಚಂದನ್ ಹೆಸರಿತ್ತು. ಸಿಇಸಿ ಕಮಿಟಿಯಲ್ಲಿ ನನ್ನ ಮಗನ ಹೆಸರು ಪೈನಲ್ ಆಗಿತ್ತು. ನಿನ್ನೆ ಸಂಜೆ ಯಡಿಯೂರಪ್ಪ ಅವರಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ ಎಂದರು.
ಯಡಿಯೂರಪ್ಪ KJP ಕಟ್ಟಿದ್ದಾಗ ಅವರ ಸಮಾಜದವರು ಬರಲಿಲ್ಲ. 6 ತಿಂಗಳ ಮುಂಚೆಯೇ ನಾನು ರಾಜೀನಾಮೆ ಕೊಟ್ಟಿದ್ದೆ. ಅವರ ಮಗ ರಾಘವೇಂದ್ರ MP ಆಗಿ ಬಿಜೆಪಿಯಲ್ಲೇ ಇದ್ದರು. 2008ರಲ್ಲಿ 110 ಸ್ಥಾನ ಗೆದ್ದಾಗ ನಮ್ಮ ಸಮಾಜದವರು ತ್ಯಾಗ ಮಾಡಿದ್ದರು. ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಗೂಳಿಹಟ್ಟಿ ಬೆಂಬಲಿಸಿದ್ದರು. ಮೂರು ಮಂದಿ ವಡ್ಡರಿಂದ ಯಡಿಯೂರಪ್ಪ ಸಿಎಂ ಆಗಿದ್ದರು. ಅಂತಹ ಮೂರು ಮಂದಿಯನ್ನ ಸಂಪುಟದಿಂದ ತೆಗೆದು ಅನ್ಯಾಯ ಮಾಡಿದ್ದರು.
ಆದರೂ ಕೂಡಾ ನಾನು ಇವರನ್ನ ಎಂದೂ ಕೈಬಿಟ್ಟು ಹೋಗಿರಲಿಲ್ಲ. ಅದಕ್ಕೆ ನಮಗೆ ಯಡಿಯೂರಪ್ಪ ಈ ಬಹುಮಾನ ಕೊಟ್ಟಿದ್ದಾರೆ. 550 ಕಿಲೋ ಮೀಟರ್ ದೂರದ ವ್ಯಕ್ತಿಗೆ ಟಿಕೆಟ್ ಕೊಡುವಂತದ್ದು ಏನಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ನಮಗೆ ತುಂಭಾನೇ ಅನ್ಯಾಯ ಮಾಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ನಂತರ ಮುಂದಿನ ನಿರ್ಧಾರ ಮಾಡುತ್ತೇನೆ. ವಿಜಯೇಂದ್ರ ಯುವಕ ಎಂದು ಅಧ್ಯಕ್ಷ ಮಾಡಿದ್ದಾರೆ, ನನ್ನ ಮಗನಿಗೆ ಟಿಕೆಟ್ ಕೊಡಲಿಲ್ಲ. ನಮ್ಮ ಸಮಾಜದ ಎಲ್ಲರೂ ಕೈ ಬಿಟ್ಟು ಹೋಗಿದ್ದಾರೆ, ನಾನು ಮಾತ್ರ ಆಧಾರವಾಗಿದ್ದೆ. ಈಗ ನಮ್ಮ ಸಮಾಜ ಮುಂದಿನ ಹೆಜ್ಜೆ ಇಡುತ್ತದೆ ಎಂದರು.
ನರೇಂದ್ರ ಮೋದಿ ದೇಶ & ರಾಜ್ಯಕ್ಕೆ ಅಗತ್ಯ ಎಂದು ನಾನು ಭಾವಿಸಿದ್ದೇನೆ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನನಗೆ ಅನ್ಯಾಯ ಮಾಡಿದರು. ಹಗಲು-ರಾತ್ರಿ ಯಡಿಯೂರಪ್ಪ ಮನೆಗೆ ನಾನು ದುಡಿದೆ, ನಾನು ಏನೂ ಅನ್ಯಾಯ ಮಾಡಿದ್ದೆ ಎಂದು ಮಾತಿನ ಉದ್ದಕ್ಕೂ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ನಿನ್ನೆ ಮಧ್ಯಾಹ್ನ ಘೋಷಣೆ ಮಾಡ್ತಾ ಇದ್ರು, ಇದನ್ನ ತಪ್ಪಿಸಿದ್ದಾರೆ. ನಮ್ಮ ಕಾರ್ಯಕರ್ತರ ಸಭೆ ಬಳಿಕ ಮುಂದಿನ ತೀರ್ಮಾನ ಮಾಡಲಾಗುತ್ತದೆ. ನೂರಾರು ಬಾರಿ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದೆ, ಅವರು ಕಾಳಜಿ ತೋರಿಲ್ಲ. ಯಡಿಯೂರಪ್ಪ ಕಿಚನ್ ಕ್ಯಾಬಿನೆಟ್‌ನಲ್ಲಿ ಇದಿದ್ದಕ್ಕೆ ಈ ಬಹುಮಾನ. KJP ನಿಂತಾಗ ನಯಾ ಪೈಸೆ ಪಾರ್ಟಿ ಫಂಡ್ ಕೊಡ್ಲಿಲ್ಲ ಎಂದರು.
ನಮ್ಮ ದುರ್ಗದಲ್ಲಿ ಮಹಾನ್ ನಾಯಕ ಇದ್ದಾನೆ, ಜಾಸ್ತಿ ಆಗಿದೆ. ಈಗಾಗಲೇ ಶಾಸ್ತಿ ಆಗಿದೆ, ಮುಂದೆಯೂ ಶಾಸ್ತಿ ಆಗುತ್ತದೆ. ಸೋತವರನ್ನ ಕರೆತಂದು MLC ಮಾಡಿದ್ವಿ, ಅಷ್ಟು ನಿಯತ್ತಿಂದ ಕೆಲಸ ಮಾಡಿದ್ದೇವೆ. ನಾನು ನಂಬಿಸಿ ಮೋಸ ಮಾಡಲ್ಲ, ಆ ಮಹಾನ್ ನಾಯಕನನ್ನ ಅರ್ಥ ಮಾಡಿಕೊಂಡು ಹೇಳುತ್ತೇನೆ. ಮದಕರಿ ಕೋಟೆಗೆ ನುಗ್ಗಲು ಸಂಧಿ ತೋರಿಸಲು ಇರಬೇಕು, ಅಂಥವರು ಇದ್ದಾರೆ. ಒಳಗೆ ಬಂದಾಗ ಏನಾಯ್ತು, ಮುಂದೆ ಮಹಾನ್ ನಾಯಕನಿಗೆ ಅದೇ ಆಗುತ್ತದೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಚಂದ್ರಪ್ಪ ಗುಡುಗಿದ್ದಾರೆ.












Click it and Unblock the Notifications