ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರದ ನಡುವೆಯೂ ಚಿತ್ರದುರ್ಗದಲ್ಲಿ ಸಂಕ್ರಾಂತಿ ಸಡಗರ

By ನಾಗಭೂಷಣ್, ಚಿತ್ರದುರ್ಗ
|
Google Oneindia Kannada News

ಚಿತ್ರದುರ್ಗ, ಜನವರಿ 13: ಹೌದು. ಇಲ್ಲಿನ ಜನರೇ ಹಾಗೆ. ಎಷ್ಟೇ ಕಷ್ಟವಿರಲಿ, ತೊಂದರೆಗಳಿರಲಿ, ಧಾರ್ಮಿಕ ವಿಚಾರಗಳಿಂದ ಮಾತ್ರ ದೂರ ಸರಿದವರಲ್ಲ. ಹಾಗಾಗಿ, ಈ ಬಾರಿಯ ಸಂಕ್ರಾಂತಿ ಹಬ್ಬಕ್ಕೂ ಪ್ರತಿ ವರ್ಷದಂತೆ ಬರದ ಛಾಯೆ ಇದೆ. ಸಾಲದ್ದಕ್ಕೆ ನೋಟ್ ಬ್ಯಾನ್ ಬಿಸಿಯೂ ತಗುಲಿದೆ.

ಆದರೂ, ಇಲ್ಲಿನ ಜನರು ಹಬ್ಬ ಹರಿದಿನಗಳಿಂದ ದೂರ ಉಳಿಯುವುದಿಲ್ಲ. ಇದ್ದಿದ್ದರಲ್ಲಿಯೇ ಅಚ್ಚುಕಟ್ಟಾಗಿ ಹಬ್ಬ ಆಚರಿಸುತ್ತಾರೆ. ಇದಕ್ಕೆ ಕಾರಣ, ಈ ಜನ ಜುಟ್ಟಿಗೆ ಮಲ್ಲಿಗೆ ಬೇಡುವವರಲ್ಲ! ಬೇರೆಡೆಯೂ ಇದೇ ರೀತಿ ಆಚರಣೆ ಇರುತ್ತಾದಾದರೂ ಹಬ್ಬದಲ್ಲಿ ಸಂಭ್ರಮದಿಂದ ಆಚರಿಸುವ ವಿಚಾರದಲ್ಲಿ ದುರ್ಗದ ಜನರದ್ದು ಎತ್ತಿದ ಕೈ.

Celebration of Sankranti in Chitradurga

ಚಳಿಯ ನಡುವೆ ಸಂಕ್ರಾಂತಿ ಎಂಬ ಮಾತು ಕಿವಿಗೆ ಬಿದ್ದಕೂಡಲೇ ಮೈ ಝುಮ್ಮೆನ್ನುತ್ತದೆ. ಎಳ್ಳುಬೆಲ್ಲ ನೆನಪಾಗಿ ಬಾಯಲ್ಲಿ ನೀರೂರುತ್ತದೆ. ಸಂಕ್ರಾಂತಿಯೆಂದರೆ ಪುರಾಣ ಕಾಣುತ್ತದೆ. ವಿಜ್ಞಾನ ಇಣುಕುತ್ತದೆ. ಸಂಪ್ರದಾಯ ಮಾತನಾಡುತ್ತದೆ.

ನಮ್ಮ ನಾಡಿನ ಪ್ರತಿಯೊಂದು ಹಬ್ಬಕ್ಕೂ ಸಂಸ್ಕೃತಿಯ ಬೆಸುಗೆಯಿದೆ. ಹಾಗೆಯೇ, ಪ್ರತಿಯೊಂದು ಊರಿಗೂ ಒಂದು ಐತಿಹ್ಯವಿದೆ. ಅಂತೆಯೇ ಕೋಟೆಯ ನಗರಿ ಚಿತ್ರದುರ್ಗದಲ್ಲಿ ಈ ಬಾರಿಯ ಸಂಕ್ರಾತಿ ವಿಶೇಷವಾಗಿದೆ.

ಚಿತ್ರದುರ್ಗದ ಕೋಟೆಯಲ್ಲಿರುವ ಊರ ದೇವತೆಯಾದ ಏಕನಾಥೇಶ್ವರಿಗೆ ವಿಶೇಷ ಅಲಂಕಾರ, ಪುಷ್ಪಾಲಂಕಾರ ಮಾಡಲಾಗುತ್ತದೆ. ಅಂದು ಅಲ್ಲಿ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರ ಇರುವುದರಿಂದ ಬೆಳಗ್ಗೆಯಿಂದಲೇ ಜನಜಂಗುಳಿ ಹೆಚ್ಚಿರುತ್ತದೆ. ಇದು ಕೋಟೆಯ ವಾತಾವರಣವನ್ನೇ ಬದಲಿಸಿರುತ್ತದೆ.

ಇತ್ತ, ದೊಡ್ಡಪೇಟೆಯ ಹುಚ್ಚಂಗಿ (ಉತ್ಸವಾಂಬಾ ದೇವಿ) ಎಲ್ಲಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ಮುಖ್ಯವಾಗಿ ಹೆಂಗಳೆಯರು ಸರ್ವಾಲಂಕಾರ ಭೂಷಿತೆಯರಾಗಿ ಇಲ್ಲಿಗೆ ದೇವಿಯ ದರ್ಶನಕ್ಕೆ ಬರುತ್ತಾರೆ.

ಇನ್ನು, ದುರ್ಗದ ಹೊಳಲ್ಕೆರೆಯ ರಸ್ತೆಯಲ್ಲಿರುವ ಗೌರಸಮುದ್ರ ದೇವಿಯ ದೇಗುಲದಲ್ಲೂ ಬೆಳಗಿನಿಂದಲೂ ಭರ್ಜರಿ ಪೂಜೆಗಳು ನಡೆಯುತ್ತವೆ. ಅಲ್ಲೇ ಸಮೀಪದಲ್ಲಿರುವ ಬರಗೇರಮ್ಮ ದೇವಿಯ ದೇಗುಲವೂ ಪೂಜೆಗಳಿಂದ ಸಮೃದ್ಧವಾಗಿರುತ್ತದೆ.

ಖ್ಯಾತ ಗಿರಿಧಾಮ ಜೋಗಿಮಟ್ಟಿಗೆ ಹೋಗುವ ದಾರಿಯಲ್ಲಿರುವ ತ್ರಿಪುರ ಸುಂದರಿ ತಿಪ್ಪನಘಟ್ಟಮ್ಮ ದೇವಿಯ ದೇಗುಲದಲ್ಲೂ ಅನೇಕ ಪೂಜೆಗಳು ಜರುಗುತ್ತವೆ.

ಇನ್ನು, ಅಂಬೇಡ್ಕರ್ ವೃತ್ತದ ಬಳಿಯಿರುವ ನಗರ ಪೊಲೀಸ್ ಠಾಣೆಯ ಆವರಣದಲ್ಲಿರುವ ಕಣಿವೆ ಮಾರಮ್ಮ ದೇಗುಲದಲ್ಲಿಯೂ ವಿಶೇಷ ಪೂಜಾಲಂಕಾರಗಳು ನಡೆಯುತ್ತವೆ. ಈ ದೇಗುಲವು ಇತ್ತೀಚೆಗಷ್ಟೇ ನವೀಕರಣಗೊಂಡಿದ್ದು, ಹೊಸ ಮೆರುಗಿನೊಂದಿಗೆ ಕಂಗೊಳಿಸಲಿದೆ.

ಮುನ್ಸಿಪಲ್ ಕಾಲೋನಿಯ ಬಳಿಯ ಎಸ್.ಪಿ. ಕಚೇರಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೊಲ್ಹಾಪುರ ಮಹಾಲಕ್ಷ್ಮಿ ದೇಗುಲದಲ್ಲೂ ಹಲವಾರು ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಗೋಪಾಲಪುರ ರಸ್ತೆಯಲ್ಲಿರುವ ದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆಗಳು ನಡೆಯಲಿವೆ.

ದೇವಿಯ ದೇವಾಲಯಗಳು ಮಾತ್ರವಲ್ಲದೆ, ನಗರದ ಪ್ರಮುಖ ದೇಗುಲಗಳಾದ ನೀಲಕಂಠೇಶ್ವರ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನಗಳಲ್ಲೂ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

ಹೊರಸಂಚಾರ: ಸಾಮಾನ್ಯವಾಗಿ, ಸಂಕ್ರಾತಿಯ ದಿನದಂತು (ಇತರ ವಿಶೇಷ ದಿನಗಳಲ್ಲೂ) ನಗರದ ಹೊರವಲಯದಲ್ಲಿರುವ ಪ್ರಸಿದ್ಧ ಪ್ರಕೃತಿ ತಾಣವಾದ ಆಡುಮಲ್ಲೇಶ್ವರಕ್ಕೆ ಒಳ್ಳೊಳ್ಳೆ ಅಡುಗೆ, ತಿನಿಸುಗಳನ್ನು ಮಾಡಿಕೊಂಡು ಮನೆಯವರು, ನೆಂಟರು, ಇಷ್ಟರನ್ನು ಸೇರಿಸಿಕೊಂಡು ಪಿಕ್ ನಿಕ್ ಮಾದರಿಯಲ್ಲಿ ಹೋಗಿ ಊಟ ಮಾಡಿ, ನಲಿದು ಬರುವ ಆ ನೋಟವೇ ಚೆನ್ನ.

ಇನ್ನು, ಸಂಜೆ ವೇಳೆ, ಪುಟ್ಟ ಹೆಣ್ಣು ಮಕ್ಕಳು ಎಳ್ಳು, ಬೆಲ್ಲ, ಕಬ್ಬು, ಕೊಡುವುದು ಚೆಂದವಾಗಿರುತ್ತದೆ.

English summary
The celebration of Makara sankranti in historic city of Chitradurga is very unique.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X