ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೆದ್ದಾರಿಯುದ್ಧಕ್ಕೂ ಕ್ಯಾಮೆರಾ ಕಣ್ಣು, ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ 500 ರೂ. ದಂಡ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲೇನ್ ಡಿಸಿಪ್ಲೀನ್ ಅನುಷ್ಠಾನದಡಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ್ರೆ ಎಷ್ಟು ದಂಡ ಕಟ್ಟಬೇಕು ಅನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
ಚಿತ್ರದುರ್ಗ, ಮಾರ್ಚ್, 14: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲೇನ್ ಡಿಸಿಪ್ಲೀನ್ ಅನುಷ್ಠಾನದಡಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಡಿ.ಜಿ ಮತ್ತು ಐ.ಜಿ.ಪಿಯವರ ಆದೇಶದ ಮೇರೆಗೆ ಬೆಂಗಳೂರಿನಿಂದ -ಚಿತ್ರದುರ್ಗ ಜಿಲ್ಲೆಯ ಮೂಲಕ ಬೆಳಗಾವಿಯವರೆಗೂ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಟೋಮೇಟೆಡ್ ನಂಬರ್ ಪ್ಲೇಟ್ ರೆಕಾಗ್ನೇಷನ್ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ.
ಹೆದ್ದಾರಿಗಳಲ್ಲಿ ಕ್ಯಾಮೆರಾ ಅಳವಡಿಕೆ
ಈಗಾಗಲೇ ಚಿತ್ರದುರ್ಗ, ದಾವಣಗೆರೆ, ಹಾವೇರಿಗಳಲ್ಲಿ ಕ್ಯಾಮೆಯಾ ಅಳವಡಿಕೆಯ ಕಾರ್ಯಾರಂಭವನ್ನು ಮಾಡಲಾಗಿದೆ. ಅದರಂತೆಯೇ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು ಮತ್ತು ಪುಣೆ ಹೆದ್ದಾರಿಯುದ್ದಕ್ಕೂ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಈ ಕ್ಯಾಮೆರಾಗಳು ಮಾರ್ಚ್ 12ರಿಂದ ಕಾರ್ಯನಿರ್ವಹಿಸುತ್ತಿದ್ದು, ಇನ್ನು ಕೆಲವೆಡೆ ಇನ್ನು ಕ್ಯಮೆರಾಗಳನ್ನು ಅಳವಡಿಸಲಾಗುತ್ತಿದೆ.

ನಿಯಮ ಉಲ್ಲಂಘಿಸಿದ್ರೆ 500 ರೂ. ದಂಡ
ಹೆದ್ದಾರಿಯ ಬಲಭಾಗದ ರಸ್ತೆಯನ್ನು ವೇಗವಾಗಿ ಚಲಿಸುವ ವಾಹನಗಳಿಗೆ ಮೀಸಲಿರಿಸಲಾಗಿದೆ. ಭಾರೀ ವಾಹನಗಳು ಬಲಭಾಗದ ರಸ್ತೆಯಲ್ಲಿ ಚಲಿಸುವಂತಿಲ್ಲ. ವಾಹನಗಳು ವೇಗಕ್ಕನುಸಾರವಾಗಿ ರಸ್ತೆಯ ಎಡ ಮತ್ತು ಮಧ್ಯದ ಮಾರ್ಗವನ್ನು ಬಳಸಬೇಕಾಗುತ್ತದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದವರಿಗೆ, ನಿಯಮ ಉಲ್ಲಂಘಿಸಿದ ಸ್ಥಳದಿಂದ ಮುಂದೆ ಬರುವ ಟೋಲ್‍ಗಳಲ್ಲಿ 500 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.
ಒಂದು ವೇಳೆ ಟೋಲ್‍ನಲ್ಲಿ ದಂಡ ಕಟ್ಟಲು ತಪ್ಪಿಸಿಕೊಳ್ಳಲು ಬೇರೆ ಮಾರ್ಗ ಬಳಸಿ ಹೋದರೂ ಸಹ ಮುಂದಿನ ದಿನಗಳಲ್ಲಿ ಯಾವುದೇ ಟೋಲ್ ದಾಟುವ ಸಂದರ್ಭದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಅಥವಾ ಇದು ಸಾರಿಗೆ ಇಲಾಖೆಯ ತಂತ್ರಾಂಶದೊಂದಿಗೆ ಸಂಯೋಜನೆ ಹೊಂದಿರುವುದರಿಂದ ವಾಹನಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸ ಕಾರ್ಯಗಳಿಗೆ ಆರ್.ಟಿ.ಓ. ಕಚೇರಿಗೆ ಹೋದಾಗ ದಂಡ ಕಟ್ಟಲೇಬೇಕಾಗುತ್ತದೆ.

ಇನ್ನು ಭಾರೀ ವಾಹನಗಳನ್ನು ಚಾಲನೆ ಮಾಡುವವರು, ಲೇನ್ ಡಿಸಿಪ್ಲೀನ್ ನಿಯಮವನ್ನು ಪಾಲಿಸಬೇಕಾಗುತ್ತದೆ. ಈ ಮೂಲಕ ರಸ್ತೆ ನಿಯಮವನ್ನು ಪಾಲಿಸಿ ನಿಮ್ಮ ಜೀವವನ್ನು ಕೂಡ ರಕ್ಷಿಸಿಕೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮನವಿ ಮಾಡಿದರು.












Click it and Unblock the Notifications