ವರದಕ್ಷಿಣೆ ಪಡೆದ ವರ ಮದುವೆ ದಿನ ಪರಾರಿ!

ಚಿತ್ರದುರ್ಗದ ಕಾವಾಡಿಗರ ಹಟ್ಟಿಯ ಮಂಜುನಾಥ್ ಜೊತೆ ಎಸ್ ಮೆದೇಹಳ್ಳಿಯ ಭುವನೇಶ್ ಅವರ ಪುತ್ರಿ ವಿವಾಹ ನಿಶ್ಚಯವಾಗಿತ್ತು. ಮಾ 12ರ ಬುಧವಾರ ವಿವಾಹ ನಡೆಯಬೇಕಾಗಿತ್ತು. ವಧುವಿನ ಕಡೆಯವರು ಮಂಗಳವಾರ ಸಂಜೆಯೇ ಕಲ್ಯಾಣ ಮಂಟಪಕ್ಕೆ ಆಗಮಿಸಿ, ವರನ ಕಡೆಯವರಿಗಾಗಿ ಕಾದು ಕುಳಿತಿದ್ದರು. ಆದರೆ, ವರ ಮಂಗಳವಾರ ಮಧ್ಯಾಹ್ನವೇ ಪರಾರಿಯಾಗಿದ್ದು, ಮದುವೆ ನಿಂತು ಹೋಗಿದೆ. [ಬಿರಿಯಾನಿಗಾಗಿ ಮುರಿದು ಬಿತ್ತು ಮದುವೆ]
ವಿವಾಹಕ್ಕೂ ಮುನ್ನವೇ ವರದಕ್ಷಿಣೆಯಾಗಿ ಮಂಜುನಾಥ್ 8 ಲಕ್ಷ ರೂಪಾಯಿ ಪಡೆದಿದ್ದರು ಎಂದು ತಿಳಿದುಬಂದಿದೆ. ಲಕ್ಷಾಂತರ ರೂ ಖರ್ಚು ಮಾಡಿ ವಿವಾಹಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ವರ ಪರಾರಿಯಾಗಿರುವುದರಿಂದ ಮದುವೆ ಮರಿದು ಬಿದ್ದಿದ್ದು, ಸಂಭ್ರಮದಿಂದ ನಡೆಯಬೇಕಾಗಿದ್ದ ಸಮಾರಂಭದಲ್ಲಿ ಮೌನ ಆವರಿಸಿದೆ.
ಮಂಗಳವಾರ ಸಂಜೆ ವರ ಪರಾರಿಯಾಗಿರುವ ವಿಷಯ ತಿಳಿದ ವಧು ಮತ್ತು ಆಕೆಯ ಪೋಷಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರನಿಗಾಗಿ ಪೋಷಕರು ಮತ್ತು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದೂರು ದಾಖಲು : ಮದುವೆ ಹಿಂದಿನ ದಿನ ಪರಾರಿಯಾಗಿರುವ ಮಂಜುನಾಥ್ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಂಜುನಾಥ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಧು ಮತ್ತು ಆಕೆಯ ಕುಟುಂಬದವರು ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.












Click it and Unblock the Notifications