Karnataka assembly election 2023: ಬಿಜೆಪಿ ಜಾತಿ, ಧರ್ಮದ ಹೆಸರಲ್ಲಿ ಮತ ಕೇಳುತ್ತಿದೆ: ಡಿ.ಕೆ. ಶಿವಕುಮಾರ್ ಆರೋಪ
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿಯವರ ಮತಯಾಚನೆ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿದ್ದೇನು ಅಂತಾ ಇಲ್ಲಿ ನೋಡಿ.
ಚಿತ್ರದುರ್ಗ, ಫೆಬ್ರವರಿ, 07: ಬಿಜೆಪಿಯವರು ಜಾತಿ, ಧರ್ಮ ಹಾಗೂ ನಾವು ಹಿಂದೂ ಮುಂದು ಎಂದು ಮತ ಕೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. "ರಾಜ್ಯದಲ್ಲಿ ಮೂರುವರೆ ವರ್ಷದಿಂದ ಆಪರೇಷನ್ ಲೋಟಸ್ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಆಪರೇಷನ್ ಲೋಟಸ್ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಚಿವ ದಿವಂಗತ ಎ. ಕೃಷ್ಣಪ್ಪ ಅವರ ಮಗಳು ಹಾಗೂ ನನ್ನ ಸೋದರಿ ಕೆ. ಪೂರ್ಣಿಮಾ ಬಿಜೆಪಿ ಶಾಸಕಿ ಇವರ ರಕ್ತದಲ್ಲಿ ಕಾಂಗ್ರೆಸ್ ಇದೆ. ಇವತ್ತು, ನಾಳೆ ಮಂತ್ರಿ ಆಗುತ್ತೇನೆ ಎಂದು ಕಾಯುತ್ತಾ ಇದ್ದರು. ಆದರೆ ಸಚಿವ ಸ್ಥಾನ ನೀಡದೆ ಬಿಜೆಪಿ ಸರ್ಕಾರ ಗೊಲ್ಲ ಸಮುದಾಯವನ್ನು ಕಡೆಗಣಿಸಿದೆ. ಆದರೆ ಕಾಂಗ್ರೆಸ್ ಪಕ್ಷ ನಾಗರಾಜ್ ಯಾದವ್ ಅವರನ್ನು MLC," ಮಾಡಿದೆ ಎಂದರು.

ಕಾಂಗ್ರೆಸ್ ಈ ದೇಶದ ಇತಿಹಾಸ
ಕಾಂಗ್ರೆಸ್ ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವ ಹೊಂದಿರುವ ಪಕ್ಷವಾಗಿದೆ. ಕಾಂಗ್ರೆಸ್ ಈ ದೇಶದ ಶಕ್ತಿ ಹಾಗೂ ದೇಶದ ಇತಿಹಾಸವಾಗಿದೆ. ನಮ್ಮ ಪಕ್ಷ ಎಲ್ಲ ವರ್ಗದ ಜನರ ಬಗ್ಗೆಯೂ ಚಿಂತನೆ ಮಾಡುತ್ತಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಲಾಗುತ್ತದೆ ಎಂದು ಈ ಡಬಲ್ ಇಂಜಿನ್ ಸರ್ಕಾರ ಹೇಳಿಕೊಂಡು ಬಂದಿದೆ. ಆದರೆ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದಲ್ಲಿ ಒಪ್ಪಿಗೆ ಸಿಕ್ಕಿಲ್ಲ. ಮಾನ, ಮರ್ಯಾದೆ ಇದ್ದರೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮತ ಕೇಳಬಾರದು ಎಂದು ಹರಿಹಾಯ್ದರು.
ಬಿಜೆಪಿ ಹಿಂದೂ ಧರ್ಮದ ಮೇಲೆ ಮತಗಳನ್ನು ಕೇಳುತ್ತದೆ. ಆದರೆ ಕಾಂಗ್ರೆಸ್ ಎಲ್ಲಾ ಸಮುದಾಯದವರು ಒಂದು ಎನ್ನುತ್ತದೆ ಎಂದರು.
ಹಾಗೆಯೇ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ರಾಜಕೀಯ ನಿವೃತ್ತಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಅವರು ಅಲ್ಲಿಯವರೆಗೆ ಕಾಯುವುದು ಬೇಡ. ನೀವು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ನೀವು ಈ ಡಿ.ಕೆ. ಶಿವಕುಮಾರ್ ಜೊತೆಗೆ ಬನ್ನಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಆಹ್ವಾನ ನೀಡಿದರು.

ಅಧಿಕಾರಕ್ಕೆ ಬಂದ ತಕ್ಷಣ ಯೋಜನೆ ಜಾರಿ
ಕಾಂಗ್ರೆಸ್ ಪಕ್ಷ ಎರಡು ಯೋಜನೆಗಳನ್ನು ಜನರಿಗೆ ನೀಡುತ್ತದೆ. ಪ್ರತಿ ಮನೆಗೆ 200ಯುನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತದೆ. ಇನ್ನೊಂದು ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ಹಣ ನೀಡಲಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿ ಚೆಕ್ ನೀಡುತ್ತೇವೆ. ಈ ಯೋಜನೆಯನ್ನು ನಾವು ಚುನಾವಣೆಯಲ್ಲಿ ಗೆದ್ದು ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಜೂನ್‌ನಿಂದಲೇ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು. ಒಂದು ವೇಳೆ ಮಾತಿನಂತೆ ನಡೆಯದಿದ್ದರೆ ನಾವು ಮತ ಕೇಳಲು ಬರಲ್ಲ ಎಂದರು.

ಸಿಎಂ ವಿರುದ್ಧ ಡಿ.ಕೆ. ಶಿವಕುಮಾರ್ ಆಕ್ರೋಶ
"ಈಗಿನ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಸ್ಕಾಲರ್ ಶಿಪ್, ಶೂ, ಯುನಿಫಾರ್ಮ್ ತೆಗದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿದೆ. ಹಿಂದೆ ಶೋಭಕ್ಕನ ಕಾಲದಲ್ಲಿ ಸೈಕಲ್, ಸೀರೆ ಕೊಡುತ್ತಿದ್ದರು, ಈಗೇನೂ ಕೊಡುತ್ತಿಲ್ಲ. ಬಿಜೆಪಿ ಸರ್ಕಾರ 40% ಲಂಚ ನಿಲ್ಲಿಸಬೇಕು. 10ಸಾವಿರ ಇದ್ದ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು, ನಾನು ಸಚಿವರಾಗಿದ್ದಾಗ 20 ಸಾವಿರ ಮಾಡಿದ್ದೇನೆ. ಸಿಎಂ ಬೊಮ್ಮಾಯಿ ಅಣ್ಣ ಗಂಡು ಯಾರೆಂದು ನಮಗೆ ಗೊತ್ತಿದೆ. ಈ ಪಕ್ಷದ ಅಭ್ಯರ್ಥಿ ಯಾರೆಂದು ಗೊತ್ತಿದೆ. ನಾನೇ ಕಣಯ್ಯ ಕ್ಯಾಂಡಿಡೇಟ್, ನಾನೇ ಗಂಡು," ಎಂದು ಡಿ.ಕೆ. ಶಿವಕುಮಾರ್ ಗುಡುಗಿದರು.

ಬಿಜೆಪಿ ವಿರುದ್ಧ ಡಿ.ಕೆ.ಶಿ ಆಕ್ರೋಶ
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭದ್ರಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇತ್ತ ಗುತ್ತಿಗೆದಾರ ಸಂಘದ ಅದ್ಯಕ್ಷ ಕೆಂಪಣ್ಣ 40% ಲಂಚದ ಬಗ್ಗೆ ಪತ್ರ ಬರೆದಿದ್ದಾರೆ. ಮತ್ತೊಂದು ಕಡೆ ಮಾಜಿ ಎಚ್. ವಿಶ್ವನಾಥ್ 20% ಲಂಚದ ಬಗ್ಗೆ ಮಾತನಾಡಿದ್ದಾರೆ. ಇವರೆಲ್ಲರೂ ನಿಮ್ಮ ಪಕ್ಷದವರೇ ಅಲ್ವಾ? ಎಂದು ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಹೇಳುತ್ತದೆಯೋ ಅವರೇ ಅಭ್ಯರ್ಥಿ. ಇದಕ್ಕೆ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ಎಲ್ಲರೂ ಒಪ್ಪಿದ್ದಾರೆ. ಯಾರಿಗೂ ಗೊಂದಲ ಬೇಡ. ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ಇರುತ್ತಾರೆ, ಅವರನ್ನು ಗೆಲ್ಲಿಸಬೇಕು. ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಾರಣಾಂತರಗಳಿಂದ ಕ್ಷೇತ್ರ ಕೈತಪ್ಪಿ ಹೋಗಿತ್ತು. ಈಗ ಕೈ ತಪ್ಪುವುದಿಲ್ಲ. ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ. ಜಿ ಪರಮೇಶ್ವರ್, ಪರಮೇಶ್ವರ್ ನಾಯ್ಕ, ಸಲೀಂ ಅಹ್ಮದ್, ಉಗ್ರಪ್ಪ, ಡಿ. ಸುಧಾಕರ್, ಬಿ. ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications