ಭಾರತ್ ಜೋಡೋ ಪಾದಯಾತ್ರೆ ಬಿಜೆಪಿಗೆ ನಡುಕವನ್ನುಂಟು ಮಾಡಿದೆ : ಮಯೂರ್ ಜಯಕುಮಾರ್
ಚಿತ್ರದುರ್ಗ, ಸೆಪ್ಟೆಂಬರ್ 26 : ದೇಶದ ಏಕತೆಗಾಗಿ ರಾಷ್ಟ್ರ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಭಾರತ್ ಜೋಡೋ ಯಾತ್ರೆ ಬಿಜೆಪಿ ನಾಯಕರಲ್ಲಿ ನಡುಕು ಉಂಟು ಮಾಡಿದೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಆಯೋಜಿಸಿದ್ದ ಯಾತ್ರೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಯಾತ್ರೆಗೆ ವ್ಯಕ್ತವಾಗುತ್ತಿರುವ ಜನಬೆಂಬಲದಿಂದ ವಿಚಲಿತರಾಗಿರುವ ಬಿಜೆಪಿ ನಾಯಕರು, ಇಲ್ಲ-ಸಲ್ಲದ ಸುಳ್ಳು ಸುದ್ದಿ ಹರಡಿಸಲು ಯತ್ನಿಸಿ ವಿಫಲರಾಗುತ್ತಿದ್ದಾರೆ. ವರ್ಷಕ್ಕೆ ಎಂಟು ಕೋಟಿ ಉದ್ಯೋಗ, ಪ್ರತಿ ವ್ಯಕ್ತಿ ಬ್ಯಾಂಕ್ ಖಾತೆಗೆ 15 ಲಕ್ಷ ಹೀಗೆ ಹೀಗೆ ಸಾಲು ಸಾಲು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಇದ್ದ ಕೆಲಸವನ್ನು ಕಿತ್ತುಕೊಳ್ಳುತ್ತಿದೆ. ಬೆಲೆ ಏರಿಕೆ ಮೂಲಕ ಜನರ ಹಣಕ್ಕೆ ಕನ್ಬ ಹಾಕಿದೆ ಎಂದು ದೂರಿದರು.
ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳದಿಂದ ಬಿಜೆಪಿ ಆಡಳಿತದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಅಂದು ಬ್ರಿಟೀಷರ ವಿರುದ್ಧ ಗಾಂಧೀಜಿ ಸೇರಿ ಅನೇಕ ಮಹನೀಯರು ದಂಡಿ ಯಾತ್ರೆ, ಉಪ್ಪಿನ ಸತ್ಯಾಗ್ರಹ ಹೀಗೆ ವಿವಿಧ ರೀತಿ ಹೋರಾಟ ನಡೆಸಿದ್ದರು. ಇಂದು ಬಿಜೆಪಿ ದುರಾಡಳಿತ, ಧರ್ಮ, ಜಾತಿ ಮಧ್ಯೆ ವಿಷ ಬೀಜ ಬಿತ್ತುವ ವಿರುದ್ಧ ರಾಹುಲ್ ಗಾಂಧಿ ಅತ್ಯಂತ ದೊಡ್ಡ ಚಳವಳಿ ಹಮ್ಮಿಕೊಂಡಿದ್ದು, ದೂರ ಹಾಗೂ ಅವಧಿಯಲ್ಲಿ ದಾಖಲೆ ಆಗುತ್ತಿದೆ ಎಂದು ಹೇಳಿದರು.

ಭಾರತ ಜನರನ್ನು ಒಗ್ಗೂಡಿಸುವ ಉದ್ದೇಶ
ಸಾವಿರಾರು ಕಿಮೀ ಪಾದಯಾತ್ರೆ ಮಾರ್ಗ ಮಧ್ಯದಲ್ಲಿ ರಾಹುಲ್ ಗಾಂಧಿ ಸ್ಥಳೀಯ, ಪ್ರಾದೇಶಿಕ ಸಮಸ್ಯೆಗಳ ಅಧ್ಯಯನ ಜೊತೆಗೆ ಜನರ ನೋವು ಆಲಿಸುತ್ತಿದ್ದಾರೆ. ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಈ ಯಾತ್ರೆ ಭಾರತ ಜನರನ್ನು ಒಗ್ಗೂಡಿಸುವ ಪ್ರಮುಖ ಉದ್ದೇಶ ಹೊಂದಿದ್ದು, ಪಕ್ಷಾತೀತ ಚಳವಳಿಯಾಗಿ ರೂಪುಗೊಂಡಿದೆ ಎಂದರು.

ಕಾಂಗ್ರೆಸ್ ಅಧಿಕಾರ ನೆನೆಯುತ್ತಿರುವ ಜನ
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಲವತ್ತೈದು ವರ್ಷದ ರಾಜಕೀಯ ಜೀವನದಲ್ಕಿ ಸೋಲು-ಗೆಲುವು ಕಂಡಿರುವ ನಾನು ಸದಾ ಜನರೊಂದಿಗೆ ಇದ್ದೇನೆ. ಕಳೆದ ಬಾರಿ ಸಚಿವನಾಗಿ ಮಾಡಿದ್ದ ಕೆಲಸಗಳನ್ನು ಉದ್ಘಾಟನೆ ಮಾಡಲು ಕೂಡ ಈಗಿನವರಿಗೆ ಸಮಯ ಇಲ್ಲ. ನನ್ನ ಅವಧಿಯಲ್ಲಿ ಒಂದು ಜಾತಿ ಗಲಭೆಗಳು ಆಗದಂತೆ ಎಚ್ಚರವಹಿಸಿದ್ದೇ, ಆದರೆ ಈಗ ಜಾತಿ ಸಂಘರ್ಷ ಹೆಚ್ಚಾಗಿದೆ. ಜನರು ನನ್ನ ಅವಧಿಯ ಆಡಳಿತ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೆ ಸಾಕ್ಷಿ ಎಂದು ಹೇಳಿದರು.

ಸುಳ್ಳುಗಳ ಮೂಲಕ ಜನರನ್ನು ವಂಚಿಸಲು ಸಾಧ್ಯವಿಲ್ಲ
ಬರೀ ಸುಳ್ಳುಗಳ ಮೂಲಕ ಜನರನ್ನು ನಿರಂತರ ವಂಚಿಸಲು ಸಾಧ್ಯವೆಂಬುದು ಬಿಜೆಪಿ ನಾಯಕರು ಅರಿತುಕೊಳ್ಳಬೇಕು. ನಮ್ಮ ಸರಕಾರವನ್ನು ಆಧಾರರಹಿತವಾಗಿ ದಸ್ ಪರ್ಸೆಂಟ್ ಸರಕಾರ ಎನ್ನುತ್ತಿದ್ದ ಭಾಷಣಕಾರನ ಪಕ್ಷ ನಲವತ್ತು ಪರ್ಸೆಂಟ್ ಪಡೆಯುತ್ತಿರುವುದನ್ನು ಗುತ್ತಿಗೆದಾರರೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ತಾಕತ್ತು ಇಲ್ಲದ ಬಿಜೆಪಿ ಸರಕಾರ, ಭ್ರಷ್ಟಚಾರದ ವಿರುದ್ಧ ಆಂದೋಲನ ಆರಂಭಿಸಿರುವ ಕಾಂಗ್ರೆಸ್ ಕಾರ್ಯಕರ್ತರ ಬಂಧನಕ್ಕೆ ಮುಂದಾಗಿರುವುದು ಹೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ
ಕ್ಷೇತ್ರದ ಉಸ್ತುವಾರಿ, ಕೆಪಿಸಿಸಿ ಕಾರ್ಯದರ್ಶಿ ಡಾ.ಸಾಸಲು ಸತೀಶ್ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಅದರಲ್ಲೂ ಹೊಳಲ್ಕೆರೆ ಕ್ಷೇತ್ರದಲ್ಲಿ ಆಂಜನೇಯ ಅವರು ಸಚಿವರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ದಾಖಲೆ ಆಗಿದೆ. ಈ ಕಾರಣಕ್ಕೆ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿದೆ. ಕ್ಷೇತ್ರದಲ್ಲಿನ ಪಕ್ಷ ಸಂಘಟನೆ ಶೈಲಿ, ಕಾರ್ಯಕರ್ತರ ಉತ್ಸಾಹ ರಾಜ್ಯಕ್ಕೆ ಮಾದರಿ ಆಗಿದೆ. ಈ ಬಾರಿ ಕ್ಷೇತ್ರದಲ್ಲಿ ಆಂಜನೇಯ ಅವರು ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಖಚಿತ. ಕ್ಷೇತ್ರದ 39 ಗ್ರಾಮ ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ, ಮೂವತ್ತು ಗ್ರಾಮ ಪಂಚಾಯತಿ ಯಲ್ಲಿ ಅಧಿಕಾರ ನಡೆಸುತ್ತಿರುವುದು ಪಕ್ಷದ ಬಲಿಷ್ಠತೆಗೆ ಸಾಕ್ಷಿ ಎಂದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಕೆ.ತಾಜಪೀರ್, ಕೆಪಿಸಿಸಿ ಸದಸ್ಯ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ , ಜಿಲ್ಲಾ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಆರ್.ಕೃಷ್ಣಮೂರ್ತಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಕ್ಷದ ವಿವಿಧ ಘಟಕದ ಹಾಗೂ ಗ್ರಾಪ ಅಧ್ಯಕ್ಷರು, ಸದಸ್ಯರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.












Click it and Unblock the Notifications