Breaking:ಚಿತ್ರದುರ್ಗ ತಲುಪಿದ ಭಾರತ್ ಜೋಡೋ ಪಾದಯಾತ್ರೆ
ಚಿತ್ರದುರ್ಗ, ಅಕ್ಟೋಬರ್ 10 : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ತುಮಕೂರು ಜಿಲ್ಲೆಯಿಂದ ಹಿರಿಯೂರು ನಗರದ ಪ್ರವೇಶಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಸೆಪ್ಟೆಂಬರ್ 30ರಿಂದ ಕರ್ನಾಟಕದಲ್ಲಿ ಆರಂಭವಾಗಿದೆ.
ರಾಜ್ಯದಲ್ಲಿ ಸೋಮವಾರ 9ನೇ ದಿನದ ಭಾರತ್ ಜೋಡೊ ಪಾದಯಾತ್ರೆ ಮುಂದುವರೆದಿದೆ, ತುಮಕೂರಿನ ಹುಳಿಯಾರು ಮೂಲಕ ಹೊಸದುರ್ಗ ಗಡಿಭಾಗದ ಹಿರಿಯೂರು ಪ್ರವೇಶಿಸಿದೆ. ಪೂರ್ವನಿಗದಿಯಂತೆ ಯಾತ್ರೆ ಅಕ್ಟೋಬರ್ 12ರಂದು ಜಿಲ್ಲೆಗೆ ಬರಬೇಕಿತ್ತು. 15ರಂದು ಬಳ್ಳಾರಿಯಲ್ಲಿ ಸಮಾವೇಶ ಏರ್ಪಡಿಸಿದ ಕಾರಣಕ್ಕೆ ಯಾತ್ರೆ ಎರಡು ದಿನ ಮುನ್ನ ಜಿಲ್ಲೆಯನ್ನು ಪ್ರವೇಶಿಸಿದೆ. ತುಮಕೂರು ಗಡಿಯಿಂದ ಬಳ್ಳಾರಿ ಗಡಿಯವರೆಗೆ 130 ಕಿ.ಮೀ ದೂರದವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಯಾತ್ರೆ ಸಾಗಲಿದೆ. ರಾಷ್ಟ್ರೀಯ ಹೆದ್ದಾರಿ 150-ಎ ಮಾರ್ಗದಲ್ಲಿ ಯಾತ್ರೆ ತೆರಳಲಿದೆ.
ಅಕ್ಟೋಬರ್ 14 ರವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. ಹಿರಿಯೂರು ಚಳ್ಳಕೆರೆ, ಮೊಳಕಾಲ್ಮೂರು ಮಾರ್ಗದಲ್ಲಿ ಯಾತ್ರೆ ನಡೆಯಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14ರ ವರೆಗೆ ರಾಹುಲ್ ಪಾದಯಾತ್ರೆ ನಡೆಯುತ್ತಿದೆ. ಹಿರಿಯೂರು ನಗರದಿಂದ ಚಳ್ಳಕೆರೆ ರಸ್ತೆಯ ಬಾಲೆನಹಳ್ಳಿ ಮುಂದುವರಿದು ಹರ್ತಿಕೋಟೆಯಲ್ಲಿ ವಾಸ್ತವ್ಯ ಹೂಡುವರು. ನಂತರ ಬೆಳಿಗ್ಗೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಚೇತನ್ ಹೋಟೆಲ್ ಬಳಿ ವಿಶ್ರಾಂತಿ ಪಡೆದು ಚಳ್ಳಕೆರೆ ನಗರದ ಪ್ರವೇಶಿಸಲಿದೆ.

ಭಾರತ್ ಜೋಡೋ ಪಾದಯಾತ್ರೆಗೆ ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ 7 ಡಿವೈಎಸ್‌ಪಿ, 29 ಪಿಐ, 89 ಪಿಎಸ್‌ಐ, 5 ಕೆಎಸ್‌ಆರ್‌ಪಿ, 7 ಡಿಎಆರ್ ತುಕಡಿಗಳು ಕರ್ತವ್ಯ ನಿರ್ವಹಿಸಲಿವೆ. ಯಾತ್ರೆ ಸಾಗುವ ಮಾರ್ಗದಲ್ಲಿ ಭದ್ರತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ಕಡೆ ವಾಹನಗಳ ಸಂಚಾರ ನಿಷೇಧಿಸಿ, ಬದಲಿ ಮಾರ್ಗಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದ್ದಾರೆ.












Click it and Unblock the Notifications