ಭದ್ರಾ ನೀರಿಗಾಗಿ ಫೆಬ್ರವರಿ 21ಕ್ಕೆ ಹಿರಿಯೂರು ಬಂದ್‌ಗೆ ತೀರ್ಮಾನ
ಹಿರಿಯೂರು, ಫೆಬ್ರವರಿ, 12: ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನೀರಾವರಿ ಯೋಜನೆ ಅಪ್ಪರ್ ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತ ಮತ್ತು ಜನಪರ ಸಂಘಟನೆಗಳ ವತಿಯಿಂದ ಫೆಬ್ರವರಿ 21ರಂದು ಹಿರಿಯೂರು ಬಂದ್‌ಗೆ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ರೈತಪರ, ದಲಿತಪರ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಮಾತನಾಡಿ, ಕೇವಲ 6,000 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಆರಂಭಗೊಂಡ ಈ ಕಾಮಗಾರಿಗೆ 12,000 ಕೋಟಿ ರೂಪಾಯಿ ವ್ಯಯಿಸಲಾಗಿದೆ.

ಕೇಂದ್ರ ಸರ್ಕಾರ 5,300 ಕೋಟಿ ರೂಪಾಯಿ ಅನುದಾನ ನೀಡುವ ಮತ್ತು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಭರವಸೆ ನೀಡಿದ್ದರೂ ಅದು ಕಾರ್ಯಗತವಾಗಿಲ್ಲ. ಈ ಬಗ್ಗೆ ಸರ್ಕಾರಗಳ ಗಮನ ಸೆಳೆಯಲು ಹೋರಾಟದ ಹಾದಿ ಅವಶ್ಯಕವಾಗಿದೆ. ಬರದ ನಾಡಿಗೆ ನೀರಿನ ಬವಣೆ ತೀರಲು ಭದ್ರಾ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಒತ್ತಡ ಹೇರುವುದು ಅನಿವಾರ್ಯವಾಗಿದೆ ಎಂದರು.
ಜಿಲ್ಲೆಯ ಜನರ ಕೂಗು ಸರ್ಕಾರಕ್ಕೆ ತಲುಪಬೇಕು. ಆ ನಿಟ್ಟಿನಲ್ಲಿ ಸರ್ವ ಸಂಘಟನೆಗಳ ವತಿಯಿಂದ ಬಂದ್‌ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರು, ಉದ್ಯಮಿಗಳು, ವರ್ತಕರು, ಬೀದಿಬದಿ ವ್ಯಾಪರಿಗಳು, ಹೋಟೆಲ್ ಉದ್ಯಮಿಗಳು, ಸರ್ಕಾರಿ ನೌಕರರು, ಕಾರ್ಮಿಕರು, ಜನಪರ, ಕನ್ನಡ, ದಲಿತ ಸಂಘಟನೆ ಸೇರಿದಂತೆ ಸರ್ವಪಕ್ಷದವರು ಬಂದ್‌ಗೆ ಬೆಂಬಲಿಸುವ ಮೂಲಕ ಬವಣೆಯನ್ನು ಸರ್ಕಾರಕ್ಕೆ ಮನದಟ್ಟು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಿ.ಒ.ಶಿವಕುಮಾರ್, ದಸ್ತಗಿರಿ ಸಾಬ್, ತಿಪ್ಪೇಸ್ವಾಮಿ, ನಾಗಭೂಷಣ್, ಚೇತನ್, ಎಚ್.ಎನ್.ಮೂರ್ತಪ್ಪ, ದಾದಾಪೀರ್, ರಂಗನಾಥ್, ಡಿಎಸ್‌ಎಸ್ ರಾಜ್ಯ ಕಾರ್ಯದರ್ಶಿ ಜೀವೇಶ್, ಬಿಡಿಎಸ್‌ಎಸ್ ಕಾರ್ಯಾಧ್ಯಕ್ಷ ತಿಮ್ಮರಾಜು, ಎನ್.ಎಸ್.ಜೋಧ, ಎಚ್.ಕೆ.ದಿವಾಕರ್ ನಾಯಕ, ಮಂಜುನಾಥ್, ಎನ್.ಬಸವರಾಜ್, ವೆಂಕಟೇಶ್, ಪಾಪಣ್ಣ, ರಮೇಶ್, ಮುರುಳಿ, ಧನಂಜಯ್, ಅನ್ಸರ್ ಅಲಿ, ಪ್ರತಾಪ್, ಗೀರೀಶ್ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications