ಪ್ರಧಾನಿ ಮೋದಿ ನಿಂದಿಸಿದ್ದ ಕಾಂಗ್ರೆಸ್ ಮುಖಂಡನಿಗೆ ಜಾಮೀನು ಮಂಜೂರು
ಚಿತ್ರದುರ್ಗ, ಮಾರ್ಚ್, 20: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾಷಣದಲ್ಲಿ ನಿಂದಿಸಿ ಸುದ್ದಿಯಾಗಿದ್ದ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿಎಸ್ ಮಂಜುನಾಥ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಜಿಲ್ಲೆಯ ಹಿರಿಯೂರು ನಗರದ ಹರಿಶ್ಚಂದ್ರ ಘಾಟ್ ಬಳಿ ಸಮುದಾಯ ಭವನಗಳ ಮುಂದುವರೆದ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮದ ವೇದಿಕೆ ಭಾಷಣ ಮಾಡುವಾಗ ಜಿ.ಎಸ್.ಮಂಜುನಾಥ್ ಮೋದಿ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ವಿಡಿಯೋ ವೈರಲ್ ಆಗಿದ್ದು, ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದ್ದರು. ಈ ವಿಚಾರವಾಗಿ ಇವರ ವಿರುದ್ಧ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂದು (ಮಾರ್ಚ್ 20) ಜಿ.ಎಸ್.ಮಂಜುನಾಥ್ ಜೆಎಮ್ಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯದಿಂದ ಜಿ.ಎಸ್.ಮಂಜುನಾಥ್‌ಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ಪಡೆದ ಬಳಿಕ ಜಿ.ಎಸ್.ಮಂಜುನಾಥ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಯಾರ ಮೇಲಾದ್ರೂ ಏಕವಚನದಲ್ಲಿ ಮಾತಾಡಿದ್ರೆ ಅದು ಅಪರಾಧ.
ಆದರೆ ನನ್ನ ಭಾಷಣದಲ್ಲಿ ಏಕ ವಚನದಲ್ಲಿ ಮಾತಾಡಿದ್ದನ್ನು ಕಟ್ ಮಾಡಿದ್ದಾರೆ. ಪ್ರಧಾನಿಗೆ ಬೈದೆ ಅಂತಾ ಕೇಸ್ ಹಾಕಿದ್ದಾರೆ. ನಾನು ಕೋರ್ಟ್‌ಗೆ ಹಾಜರಾಗಿ ಬೇಲ್ ತೆಗೆದುಕೊಂಡಿದ್ದೇನೆ. ನನ್ನ ಸಂಪೂರ್ಣ ಭಾಷಣ ಯಾರೂ ಎಲ್ಲೂ ತೋರಿಸಿಲ್ಲ ಎಂದರು.
ಸರ್ಕಾರ ಯಾವುದೇ ಇದ್ರೂ ಜನ ಪ್ರಶ್ನೆ ಮಾಡಬೇಕು ಅಂತಾ ನಾನು ಹೇಳಿದ್ದೇನೆ. ಈ ಕೆಟ್ಟ ವ್ಯವಸ್ಥೆ ವಿರೋಧಿಸಿ ನಾವೆಲ್ಲ ನಿಲ್ಬೇಕು ಅನ್ನೋದು ನನ್ನ ವಾದ ಆಗಿತ್ತು. ಕಾಲಲ್ಲಿರೋದು ತೊಗೊಂಡು ಪ್ರಧಾನಿಗೆ ಹೊಡೀತಿನಿ ಅಂತಾ ನಾನೆಲ್ಲೂ ಹೇಳಿಲ್ಲ, ನಾನು ವ್ಯವಸ್ಥೆಗೆ ಅಂತಾ ಹೇಳೀದೀನಿ. ನ್ಯಾಯಾಲಯ ಇದೆ, ತನಿಖಾಧಿಕಾರಿಗಳು ಇದ್ದಾರೆ ನೋಡೋಣ ಎಂದು ತಿಳಿಸಿದರು.
2014ರಲ್ಲಿ ಗ್ಯಾಸ್ ಬೆಲೆ 450 ರೂಪಾಯಿ ಇತ್ತು. ಈಗ 1,150 ರೂಪಾಯಿ ಇದೆ. ಎಲೆಕ್ಷನ್ ಬಂದಂತೆ 100 ರೂಪಾಯಿ ಕಡಿಮೆ ಮಾಡಿದ್ದಕ್ಕೆ ನಗು ಬಂತು ನನಗೆ. ನಗುನಾ ಆ ರೀತಿ ವ್ಯಕ್ತ ಮಾಡಿದೆ. ಅದನ್ನು ಬಿಟ್ಟು ಮತ್ತೇನೂ ಇಲ್ಲ ಎಂದು ಬೇಲ್ ಪಡೆದು ಜಿ.ಎಸ್.ಮಂಜುನಾಥ್ ತಿಳಿಸಿದರು.
ಡಿಕೆಶಿ ಆರೋಪಕ್ಕೆ ಶಿವಶಂಕರಪ್ಪ ಹೇಳಿದ್ದೇನು?
ಇದೀಗ ರಾಜ್ಯದೆಲ್ಲೆಡೆ ಲೋಕಸಭೆ ಸಮರಕ್ಕೆ ಎಲ್ಲಾ ಪಕ್ಷಗಳಿಂದಲೂ ಭರ್ಜರಿ ತಯಾರಿ ನಡೆಯುತ್ತಿದೆ. ಹಾಗೆಯೇ ರಾಜ್ಯ ಸರ್ಕಾರ ಪತನಗೊಳಿಸಲು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ -ಜೆಡಿಎಸ್ ನಾಯಕರು 55 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಸಂಪರ್ಕಸಿದ್ದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಳ್ಳಿ ಹಾಕಿದ್ದಾರೆ. ಆಪರೇಷನ್ ಕಮಲ ಸುಳ್ಳು, ನನ್ನನ್ನು ಯಾರೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ಹತ್ತಿರ ಯಾರೂ ಬಂದಿಲ್ಲ. ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದರೆ ಅವರನ್ನೇ ಕೇಳಿ. ಸರ್ಕಾರ ಬೀಳಿಸಲು ನನ್ನ ಸಹಾಯವನ್ನು ಯಾರೂ ಕೇಳಿಲ್ಲ. ಶಿವಕುಮಾರ್ ಹೇಳಿರುವುದು ಸುಳ್ಳು. ಅವರನ್ನೇ ಕೇಳಿ. ದುಡ್ಡಂತೂ ಬಂದಿಲ್ಲ ಎಂದು ಹೇಳಿದರು.
ನನಗೆ ದುಡ್ಡು ಕೊಟ್ಟಿದ್ದರೆ ಎಣಿಸಿಕೊಂಡು ಇಟ್ಟುಕೊಳ್ಳುತ್ತಿದ್ದೆ. ಬಿಜೆಪಿಯವರು, ಜೆಡಿಎಸ್‌ನವರು ಹಾಗೂ ಕಾಂಗ್ರೆಸ್‌ನವರು ಸೇರಿದಂತೆ ಯಾರೂ ಬಂದಿಲ್ಲ. ಹಣದ ಆಮೀಷ ಯಾರೂ ಒಡ್ಡಿಲ್ಲ. ಸರ್ಕಾರ ಪತನಗೊಳಿಸಲು ನನ್ನನ್ನು ಸಂಪರ್ಕಿಸಿದ್ದರು ಎಂಬ ಮಾತು ಹೇಳಿರುವ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ. ನನ್ನನ್ನು ಏನು ಕೇಳುತ್ತೀರಾ ಎಂದು ಪ್ರಶ್ನಿಸಿದರು.
ರಾಜ್ಯಸಭೆ ಚುನಾವಣೆ ವೇಳೆ ಸಹಾಯ ಮಾಡುವಂತೆ ಕೇಳಿದರು. ದುಡ್ಡು ಕೊಡುತ್ತೇವೆ ಎಂದು ಯಾರೂ ಹೇಳಿಲ್ಲ. ನಾವು ಮತ ಕೇಳಬೇಡಿ, ದುಡ್ಡು ಬೇಕಾದರೆ ನಾವೇ ಸಹಾಯ ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ನಮ್ಮ ಮತಗಳನ್ನು ಕೇಳಬೇಡಿ ಎಂದು ಹೇಳಿದ್ದು ನಿಜ. ಆದ್ರೆ, ಹಣದ ಆಮಿಷ ಯಾರೂ ಒಡ್ಡಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications