ವಿಧಾನಸಭೆ ಚುನಾವಣೆ 2023: ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್‌ಗಾಗಿ ಐವರ ಪೈಪೋಟಿ, ಇಲ್ಲಿದೆ ವಿವರ
ಚಿತ್ರದುರ್ಗ, ಡಿಸೆಂಬರ್, 12: 2023ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ಟಿಕೆಟ್ ಪಡೆಯಲು ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಹಿರಿಯೂರು ಕ್ಷೇತ್ರವನ್ನು 2018ರಲ್ಲಿ ಮೊದಲ ಬಾರಿಗೆ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ತೆಕ್ಕೆಗೆ ಸೇರಿಸಿದರು.
ಇದೀಗ ಈ ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಿಂದ ವಶಪಡಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಟಿಕೆಟ್‌ಗಾಗಿ ಬಾರಿ ಪೈಪೋಟಿ ನಡೆಸುತ್ತಿದ್ದಾರೆ. ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರ ಎಂದರೇ ಸಾಕು, ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿಯೇ ಎಲ್ಲರೂ ತಿರುಗಿ ನೋಡುವಂತೆ ಮಾಡುವ ಕ್ಷೇತ್ರ ಇದಾಗಿದೆ. ಯಾಕೆಂದರೆ ದುಡ್ಡು ಇದ್ದವರು ಹೊರಗಿನವರು ಯಾರೇ ಆಗಲಿ ಬಂದು ಇಲ್ಲಿ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಬಹುದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಹೊಸ್ತಿಲಲ್ಲಿದ್ದ ಜೆಡಿಎಸ್ ಕೊನೆಯ ಗಳಿಗೆಯಲ್ಲಿ ಸೋಲನುಭವಿಸಿತ್ತು. ಈ ಬಾರಿ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಪಂಚರತ್ನಗಳು ಟಿಕೆಟ್‌ಗೆ ಭಾರಿ ಪೈಪೋಟಿ ನಡೆಸುತ್ತಿದ್ದಾರೆ.

ಕುತೂಹಲ ಮೂಡಿಸಿದ ಹಿರಿಯೂರು ಕ್ಷೇತ್ರ
ಕ್ಯಾಸಿನೋ ದೊರೆ ವೀರೇಂದ್ರ (ಪಪ್ಪಿ), ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪ, ನಿರ್ಮಿತಿ ಕೇಂದ್ರದ ಅಧಿಕಾರಿ ಮೂಡಲಗಿರಿಯಪ್ಪ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿಲಾಜನಹಳ್ಳಿ ಎಂ. ಜಯಣ್ಣ ಹಾಗೂ ಮಾಜಿ ತಾಲೂಕು ಜೆಡಿಎಸ್ ಅಧ್ಯಕ್ಷ ಶಿವಪ್ರಸಾದ್ ಗೌಡ ನಡುವೆ ಪೈಪೋಟಿ ಶುರುವಾಗಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಐವರೊಂದಿಗೆ ಒಂದೆರಡು ಸುತ್ತಿನ ಸಭೆ ನಡೆಸಿದ್ದಾರೆ. ಅಲ್ಲದೇ ಇವರಿಗೆ ಒಮ್ಮತದ ತೀರ್ಮಾನಕ್ಕೆ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಐವರ ನಡುವಿನ ಮುಸುಕಿನ ಗುದ್ದಾಟದಲ್ಲಿ ಟಿಕೆಟ್ ಯಾರಿಗೆ ಪಡೆದುಕೊಳ್ಳುತ್ತಾರೆ ಅನ್ನುವ ಸುಳಿವು ಮಾತ್ರ ಇನ್ನು ಸಿಗುತ್ತಿಲ್ಲ. ಐವರ ಪೈಪೋಟಿಯಿಂದ ಇತ್ತ ವರಿಷ್ಠರು ಮಾತ್ರ ಕೊನೆ ಗಳಿಗೆಯವರೆಗೂ ಕಾದು ನೋಡುವ ತಂತ್ರ ರೂಪಿಸಿದ್ದಾರೆ ಎನ್ನಬಹುದು.

ವೀರೇಂದ್ರ ಪಪ್ಪಿ ವಿರುದ್ಧ ತಿರುಗಿಬಿದ್ದ ಜನ
ಚುನಾವಣೆ ಇನ್ನು ಒಂದು ವರ್ಷ ಬಾಕಿ ಇರುವಂತೆಯೇ ಹಿರಿಯೂರು ಕ್ಷೇತ್ರದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ, ನನಗೆ ಟಿಕೆಟ್ ಸಿಗುತ್ತದೆ ಎಂದು ವೀರೇಂದ್ರ ಪಪ್ಪಿ ಅವರು ಹೇಳಿಕೊಳ್ಳುತ್ತಿದ್ದರು. ನಗರದ ಶ್ರೀ ತೇರು ಮಲ್ಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ತಾಲೂಕಿನ ಕಣಿವೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಮುಂದಾದರು. ಕ್ಷೇತ್ರದ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ಇವರೇ ನಮ್ಮ ಅಭ್ಯರ್ಥಿ ಎನ್ನುವ ಮಟ್ಟಿಗೆ ವಾತಾವರಣ ಸೃಷ್ಟಿ ಆಗಿತ್ತು. ಆದರೆ ವಿರೋಧಿ ಗುಂಪೊಂದು ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ವರಿಷ್ಠರು ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬಾರದು ಎಂದು ಪಪ್ಪಿ ನಡೆಗೆ ಬ್ರೇಕ್ ಹಾಕಿದ್ಧರು. ವಿರೋಧ ಬಣದ ಗುಂಪನ್ನು ಗಮನಿಸಿದ ಪಪ್ಪಿ ಹಿರಿಯೂರು ಕ್ಷೇತ್ರದ ಸವಾಸ ಬೇಡ ಎಂದು ಚಿತ್ರದುರ್ಗ ಕಡೆ ಮುಖ ಮಾಡಿದ್ದರು. ಅಲ್ಲಿಯೂ ಸರಿಯಾದ ಉತ್ತರ ಸಿಗದ ಹಿನ್ನೆಲೆಯಲ್ಲಿ ನಂತರ ಹಿರಿಯೂರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಜೆಡಿಎಸ್ ನಾಯಕರ ಲೆಕ್ಕಾಚಾರ ಏನು?
ಮುಂದಿನ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳಬೇಕು ಎನ್ನುವುದು ಜೆಡಿಎಸ್ ನಾಯಕರ ಲೆಕ್ಕಾಚಾರವಾಗಿದೆ. ಆದರೆ ಟಿಕೆಟ್ ಯಾರಿಗೆ ಎಂಬುದು ಇನ್ನು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಒಂದು ಹಂತದಲ್ಲಿ ನಟ ದೊಡ್ಡಣ್ಣನ ಅಳಿಯ ವೀರೇಂದ್ರ ಪಪ್ಪಿಗೆ ಮತದಾರರು ಒಲವು ತೋರಿದ್ದಾರೆ. ಮತ್ತೊಂದೆಡೆ ಸ್ಥಳೀಯ ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪ ಅವರು ಅಧಿಕಾರಿಯಾಗಿದ್ದಾಗ ಉತ್ತಮ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಇವರಿಗೆ ಟಿಕೆಟ್ ನೀಡಿದರೆ ಸೂಕ್ತ ಎನ್ನುತ್ತಾರೆ ಮತದಾರರು. ಇನ್ನು ನಂತರದ ಸ್ಥಾನದಲ್ಲಿ ಮೂಡಲಗಿರಿಯಪ್ಪ, ಪಿಲಾಜನಹಳ್ಳಿ ಜಯಣ್ಣ ಹಾಗೂ ಶಿವಪ್ರಸಾದ್ ಗೌಡ ಇದ್ದಾರೆ ಎನ್ನಲಾಗಿದೆ.

ರವೀಂದ್ರಪ್ಪನಿಂದ ಬಿರುಸಿನ ಪ್ರಚಾರ
ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣನ ಪರಮ ಆಪ್ತರಾಗಿದ್ದಾರೆ. ರೇವಣ್ಣನ ಭರವಸೆಯೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಈಗಾಗಲೇ ತಾಲೂಕಿನ ಎಲ್ಲಾ ಹಳ್ಳಿಗಳಲ್ಲೂ ರವೀಂದ್ರಪ್ಪ ಅವರ ಪ್ಲೆಕ್ಸ್ ಬ್ಯಾನರ್ ಕಟ್ಟಲಾಗಿದೆ. ಉಳಿದಂತೆ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿ, ಮದುವೆ, ನಾಮಕರಣ, ದೇವರ ಉತ್ಸವ, ಜಾತ್ರೆ, ಇತರೇ ಸ್ಥಳೀಯ ಕಾರ್ಯಕ್ರಮಗಳಲೂ ಭಾಗವಹಿಸುತ್ತಿದ್ದಾರೆ. ಜೊತೆಗೆ ಸ್ಥಳೀಯ ನಾಯಕರನ್ನು ಭೇಟಿ ಮಾಡಿ ಬೆಂಬಲ ಸೂಚಿಸುವಂತೆಯೂ ಕೋರಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಮನಸ್ಸು ಮಾಡಿದರೆ ರವೀಂದ್ರಪ್ಪಗೆ ಟಿಕೆಟ್ ಬಹುತೇಕ ಖಚಿತವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಡಿ.ಯಶೋಧರಗೆ ಪಕ್ಷ ಮಣೆ ಹಾಕುತ್ತಾ?
ಪ್ರಮುಖವಾಗಿ ಹಿರಿಯೂರು ಕ್ಷೇತ್ರದಲ್ಲಿ ದೇವೇಗೌಡ ಕುಟುಂಬದ ಮಾನಸ ಪುತ್ರ ಎಂದು ಕರೆಸಿಕೊಳ್ಳುವ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ಅವರ ಪಾತ್ರ ಬಹಳ ಮುಖ್ಯವಾಗಿದೆ. ಯಾಕೆಂದರೆ ಜಿಲ್ಲಾಧ್ಯಕ್ಷರ ಒಲವು ಯಾರ ಕಡೆ ಇದೆ ಎಂಬುದು ಗೊತ್ತಿಲ್ಲ, ಒಂದು ವೇಳೆ ಯಾರ ಹೆಸರನ್ನೂ ಸೂಚಿಸುತ್ತಾರೆ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಜಿಲ್ಲಾಧ್ಯಕ್ಷ ಡಿ. ಯಶೋಧರ ಅವರು ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸುಮಾರು 42 ಸಾವಿರ ಮತಗಳನ್ನು ಪಡೆದಿದ್ದರು. ಬದಲಾದ ಸಮಯಕ್ಕೆ ಪಕ್ಷ ಮತ್ತೊಮ್ಮೆ ತಿರ್ಮಾನಿಸಿ ಡಿ.ಯಶೋಧರ ಅವರನ್ನು ಅಭ್ಯರ್ಥಿ ಮಾಡಿ ಕಣಕ್ಕೆ ಇಳಿಸಿದರೂ ಅಚ್ಚರಿಯಿಲ್ಲ ಎನ್ನುವಂತಾಗಿದೆ.
ಒಟ್ಟಾರೆಯಾಗಿ ತ್ರಿಕೋನ ಸ್ಪರ್ಧೆಯಿಂದ ಏರ್ಪಡುವ ಹಿರಿಯೂರು ಕ್ಷೇತ್ರ ಯಾವ ಪಕ್ಷದಿಂದ ಯಾರು ಯಾರು ಸ್ಪರ್ಧಿಸುತ್ತಾರೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಮೂರು ಪಕ್ಷಗಳ ಅಭ್ಯರ್ಥಿಗಳ ಮೇಲೆ ಯಾರಿಗೆ ಗೆಲುವು ಸಿಗುತ್ತದೆ ಎಂಬುದನ್ನು ನಿರೀಕ್ಷಿಸಬಹುದಾಗಿದೆ. ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ವರಿಷ್ಠರು ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಗೊಂದಲದ ಗೂಡಾಗಿರುವ ಹಿರಿಯೂರಿನಲ್ಲಿ ಯಾರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications