ಸಿದ್ದರಾಮಯ್ಯ ಬರುತ್ತಿದ್ದಂತೆ ಕೈ ಕೊಟ್ನಂತೆ ಮಳೆರಾಯ: ಹೀಗೆ ಆರೋಪಿಸಿದ್ಯಾರು & ಉದ್ದೇಶ ಏನು?
ಚಾಮರಾಜನಗರ, ಮಾರ್ಚ್, 04: ಸಿದ್ದರಾಮಯ್ಯ ಬರುತ್ತಿದ್ದಂತೆ ಮಳೆರಾಯ ಕೈಕೊಟ್ಟು ಭೀಕರ ಬರಗಾಲ ಆವರಿಸಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ನಡಹಳ್ಳಿ ಎ.ಎಸ್.ಪಾಟೀಲ್ ವ್ಯಂಗ್ಯ ಮಾಡಿದರು.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ರೈತ ವಿರೋಧಿ ನಿಲುವು ತಳೆದಿದೆ. ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರನ್ನು ಹರಿಸಿ ರಾಜ್ಯದ ರೈತರಿಗೆ ಅನ್ಯಾಯ ಎಸಗಿದೆ ಎಂದು ಕಿಡಿಕಾರಿದರು.

ಇನ್ನು ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವ ಮೂಲಕ ಕುಡಿಯುವ ನೀರಿಗೂ ಹಾಹಾಕಾರ ಪಡಬೇಕಾಗಿದೆ. ಇಷ್ಟಾದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೆರೆಗಳನ್ನು ತುಂಬಿಸುವುದು, ರೈತರಿಗೆ ಮೇವಿನ ಬೀಜ ನೀಡುವುದು, ರೈತ ಸಭೆ ನಡೆಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಒರಿಜಿನಲ್ FSL ವರದಿ ಬಿಡುಗಡೆ ಮಾಡಿದ್ದೇವೆ: ಶಕ್ತಿಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದರ ಒರಿಜಿನಲ್ FSL ವರದಿ ಬಿಡುಗಡೆ ಮಾಡಿದ್ದೇವೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಅವರು ಮಾತನಾಡಿ, ರಾಜ್ಯದ ಶಕ್ತಿಕೇಂದ್ರದಲ್ಲಿ ದೇಶ ವಿರೋಧಿಗಳು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಾರೆ. ಆದರೆ ಆ ಸ್ಥಳದಲ್ಲೇ ಇಲ್ಲದ ಸಿಎಂ ಸಿದ್ದರಾಮಯ್ಯ ಇಲ್ಲ ಅವರು ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದಾರೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಹಾಗಿದ್ದರೆ ಸಿಎಂ FSL ಎಕ್ಸ್ ಫರ್ಟಾ? ಎಂದು ಪ್ರಶ್ನೆ ಮಾಡಿದ್ದಾರೆ.
ನಾಸೀರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ್ ಪರ ಘೋಷಣೆ ಕೂಗಿರುವ ಬಗ್ಗೆ ನಿಮ್ಮ ವರದಿ ಬೇರೆ ಇದ್ದರೆ ಬಹಿರಂಗ ಪಡಿಸಿ. ಇಲ್ಲದಿದ್ದರೆ ದೇಶ ದ್ರೋಹಿ ಘೋಷಣೆ ಕೂಗಿದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸವಾಲು ಹಾಕಿದ ಎನ್.ಮಹೇಶ್, ನಾವು ದೇಶ ದ್ರೋಹದ ಹೇಳಿಕೆ ವಿರುದ್ದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಸರ್ಕಾರ ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದರು.












Click it and Unblock the Notifications