ಬೆಂಗಳೂರಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ: ಎರಡನೇ ದಿನವೂ ಯಶಸ್ವಿ, ಇಂದು ಹೇಗಿತ್ತು
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನವೂ ಯಶಸ್ವಿಯಾಗಿ ನಡೆದಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡನೇ ದಿನವೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಇದೀಗ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಜಯನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ಮುಖ್ಯರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಆಕ್ರಮಿಸಿಕೊಂಡಿದ್ದ ವಾಣಿಜ್ಯ ಮಳಿಗೆಗಳ ಮೆಟ್ಟಿಲುಗಳು, ಅಂಗಡಿಗಳು, ಶೆಡ್ ಹಾಗೂ ಇತರೆ ಒತ್ತುವರಿಗಳನ್ನು ತೆರವುಗೊಳಿಸುವ ಸ್ಥಳಕ್ಕೆ ಖುದ್ದು ಆಯುಕ್ತ ಕೆ.ಎನ್ ರಮೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಯನಗರ 11ನೇ ಮುಖ್ಯ ರಸ್ತೆಯ ಕೂಲ್ ಜಾಯಿಂಟ್ ಸಿಗ್ನಲ್‌ನಿಂದ ಶಾಲಿನಿ ಗ್ರೌಂಡ್‌ವರೆಗೆ ಇಂದು ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಫುಟ್‌ಪಾತ್ ಆಕ್ರಮಿಸಿ ಅನೇಕ ವಾಣಿಜ್ಯ ಮಳಿಗೆಗಳನ್ನು ಹಾಗೂ ಅಂಗಡಿಗಳು ಮೆಟ್ಟಿಲು ಮಾಡಿಕೊಂಡಿದ್ದನ್ನು ನೆಲಸಮ ಮಾಡಲಾಯಿತು. ಜೊತೆಗೆ ಫುಟ್‌ಪಾತ್ ಮೇಲಿದ್ದ ಮರಗಳ ಸುತ್ತಲಿನ ಕಸವನ್ನು ಸಂಪೂರ್ಣ ತೆರವುಗೊಳಿಸಲು ಆಯುಕ್ತರು ಸೂಚನೆ ನೀಡಲಾಯಿತು. ಜಯನಗರ 30ನೇ ಅಡ್ಡರಸ್ತೆಯಿಂದ 9ನೇ ಮುಖ್ಯರಸ್ತೆಯವರೆಗೆ 1.50 ಕಿ.ಮೀ ವ್ಯಾಪ್ತಿಯಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. ಜೆ.ಪಿ.ನಗರ 21ನೇ ಮುಖ್ಯ ರಸ್ತೆಯ 9ನೇ ಅಡ್ಡರಸ್ತೆಯಿಂದ ಹೊರ ವರ್ತುಲ ರಸ್ತೆಯವರೆಗೆ 0.85 ಕಿ.ಮೀ ಪಾದಚಾರಿ ಮಾರ್ಗ ಮುಕ್ತಗೊಳಿಸಲಾಗಿದೆ.

28ನೇ ಮುಖ್ಯ ರಸ್ತೆಯಿಂದ ಬಿಟಿಎಂ ಮೆಟ್ರೋ ನಿಲ್ದಾಣದ ತನಕ 1.6 ಕಿ.ಮೀ ವ್ಯಾಪ್ತಿಯಲ್ಲಿ ಒಂದು ಕಡೆ ಸಂಪೂರ್ಣವಾಗಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣದಿಂದ 39ನೇ ಮುಖ್ಯ ರಸ್ತೆಯ ತನಕ 400 ಮೀಟರ್ ಉದ್ದದ ಫುಟ್‌ಪಾತ್ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.
ಹೊರ ವರ್ತುಲ ರಸ್ತೆಯ ಬಿಪಿನ್ ರಾವತ್ ಉದ್ಯಾನವನದ ವೃತ್ತದ (ದೇವೆಗೌಡ ಪೆಟ್ರೋಲ್ ಬಂಕ್ ಹತ್ತಿರ) 7ನೇ ಮುಖ್ಯರಸ್ತೆಯಿಂದ ಗುರುರಾಜ ಲೇಔಟ್‌ವರೆಗೆ ಸುಮಾರು 0.80 ಕಿ.ಮೀ ಪಾದಚಾರಿ ಮಾರ್ಗವನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 10.40 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ. ಕಾರ್ಯಾಚರಣೆಯ ವೇಳೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ 39 ಬೀದಿ ಬದಿಯ ಅಂಗಡಿಗಳು ಹಾಗೂ 104 ಫುಟ್‌ಪಾತ್ ಒತ್ತುವರಿಗಳನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 127 ಒಟ್ಟು ಸಿಬ್ಬಂದಿ, 30 ಟ್ರ್ಯಾಕ್ಟರ್‌ಗಳು, ಜೆಸಿಬಿ ಹಾಗೂ ಕ್ರೇನ್ ಗಳನ್ನೂ ಬಳಸಿಕೊಳ್ಳಲಾಗಿದ್ದು, ಪಾದಚಾರಿ ಮಾರ್ಗದಲ್ಲಿ ಅಡೆತಡೆ ಓಡಾಟಕ್ಕೆ ಅವಕಾಶ ಮಾಡಲಾಗಿದೆ.
ದಕ್ಷಿಣ ನಗರ ಪಾಲಿಕೆಯು ಹೈಕೋರ್ಟ್ ಆದೇಶದನ್ವಯ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ನಗರದ ಸುಗಮ ಸಂಚಾರವನ್ನು ಖಾತ್ರಿಪಡಿಸುವ ಉದ್ದೇಶದಿಂದ ಇಂತಹ ಒತ್ತುವರಿ ತೆರವು ಕಾರ್ಯಾಚರಣೆಗಳನ್ನು ಮುಂದೆಯೂ ಮುಂದುವರಿಸಲಿದೆ ಎಂದು ಕಾರ್ಯಾಚರಣೆ ವೇಳೆ ಆಯುಕ್ತ ಕೆ.ಎನ್ ರಮೇಶ್ ಅವರು ತಿಳಿಸಿದ್ದಾರೆ.












Click it and Unblock the Notifications