ಚಳ್ಳಕೆರೆ: ಚುನಾವಣೆ ಕರ್ತವ್ಯದ ವೇಳೆ ಹೃದಯಾಘಾತದಿಂದ ಶಿಕ್ಷಕಿ ಸಾವು
ಚಳ್ಳಕೆರೆ, ಏಪ್ರಿಲ್, 26: ಇಂದು (ಏಪ್ರಿಲ್ 26) ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಇನ್ನು ಮತದಾನದ ವೇಳೆ ಹಲವರು ಬಿಸಿಲಿನ ಝಳಕ್ಕೆ ಸುಸ್ತಾಗಿ ಕುಸಿದ ಘಟನೆಗಳು ನಡೆದಿವೆ. ಹಾಗೆಯೇ ಇದೀಗ ಚುನಾವಣೆ ಕರ್ತವ್ಯದ ವೇಳೆ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ಮೇಗಳಗೊಲ್ಲರಹಟ್ಟಿ ಮತಗಟ್ಟೆ ಸಂಖ್ಯೆ 202ರಲ್ಲಿ ಎಪಿಆರ್‌ಈ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ.

ಇನ್ನು ಮೃತರನ್ನು ಯಶೋಧ (58) ವರ್ಷ ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕಿ ಯಶೋಧ ಅವರು ಬೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಕಾಂಗ್ರೆಸ್ ಜನಪರ ಆಡಳಿತಕ್ಕೆ ಜನ ಸಹಮತ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ಇಡೀ ದೇಶಕ್ಕೆ ಮಾದರಿಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮರ್ಮಘಾತದ ಫಲಿತಾಂಶ ಬರಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಚಿತ್ರದುರ್ಗದ ತರಳಬಾಳು ಬಾಲಕಿಯರ ಪ್ರೌಢಶಾಲೆಯ ಬೂತ್ ನಂಬರ್ 172ರಲ್ಲಿ ಶುಕ್ರವಾರ (ಏಪ್ರಿಲ್ 26) ಮತ ಚಲಾಯಿಸಿದ ಬಳಿಕ ಅವರು ಮಾತನಾಡಿದರು.
ಕನ್ನಡ ನಾಡಿನ ಜನ ಕೃತಜ್ಞತೆ ಗುಣದವರು. ಅದರಲ್ಲೂ ಗೃಹಲಕ್ಷ್ಮಿಯರು ಪಡೆದ ಫಲಕ್ಕೆ ಪ್ರತಿಯಾಗಿ ಕೃತಜ್ಞತೆ ತೋರುವ ವಿಶಾಲ ಹೃದವಂತರು. ಯಾವುದೇ ಮತಗಟ್ಟೆ ಬಳಿ ಜಮಾಯಿಸಿರುವ ಮಹಿಳೆಯರು ನಮ್ಮ ಮತ ಸಿದ್ದರಾಮಯ್ಯ ಅವರ ಪಕ್ಷ ಕಾಂಗ್ರೆಸ್ಸಿಗೆ ಎಂದು ಹಸ್ತ ತೊರಿಸಿ ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಇದೆ ಎಂದು ಸಮೀಕ್ಷೆಗಳು ಹೇಳಿದ್ದು, ಇದೇ ಕಾರಣಕ್ಕೆ ಸೋಲುವ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಯೋಗಿ ಆದಿತ್ಯನಾಥ್ ಬರಲಿಲ್ಲ. ತುಮಕೂರಿಗೆ ಅಮತ್ ಶಾ ಕೂಡ ಬರಲೇ ಇಲ್ಲ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಚುನಾವಣೆಗೆ ಮುನ್ನವೇ ಬಿಜೆಪಿ ದಕ್ಷಿಣ ಭಾರತದಲ್ಲಿ ಸೋಲು ಒಪ್ಪಿಕೊಂಡಿದೆ ಎಂದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಿಜಾಬ್, ಹಲಾಲ್ ಕಟ್ ಎಂದು ಹೇಳಿ ಹೀನಾಯ ಸೋಲು ಅನುಭವಿಸಿದರು ಬುದ್ದಿ ಕಲಿಯದೇ ಲೋಕಸಭಾ ಚುನಾವಣೆಯಲ್ಲೂ ಅದೇ ದ್ವೇಷದ ಭಾವನೆ ಪ್ರಸ್ತಾಪಿಸಿದ್ದಾರೆ. ಬಸವಣ್ಣನ ನಾಡಿನ ಜನರು, ಇಂತಹ ಜಾತಿ-ಧರ್ಮದ ಮಧ್ಯೆ ವಿಷ ಬೀಜ ಬಿತ್ತುವುದನ್ನು ಸಹಿಸುವುದಿಲ್ಲ. ಈ ಕಾರಣಕ್ಕೆ ಬಿಜೆಪಿ ನಾಯಕರಿಗೆ ಈ ಭಾರೀ ಮರ್ಮಘಾತ ಫಲಿತಾಂಶವನ್ನು ಜನ ನೀಡಲಿದ್ದಾರೆ ಎಂದು ಹೇಳಿದರು.
ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರವಾಗಿ ಜಿಲ್ಲಾ ಮಂತ್ರಿ ಹಾಗೂ ಆರು ಮಂದಿ ಶಾಸಕರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಭಾರಿ, ದೇಶದ ಜನರ ಅಚ್ಚುಮೆಚ್ಚಿನ ನಾಯಕಿ ಪ್ರಿಯಾಂಕಾ ಗಾಂಧಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ.
ಜೊತೆಗೆ ಬಿಜೆಪಿಯ ಸಪ್ಪೆ ಪ್ರಚಾರ, ಕಾರಜೋಳ ಅವರ ಕಾಟಾಚಾರದ ಸ್ಪರ್ಧೆ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಟಿಕೆಟ್‍ಗೆ 25 ಮಂದಿ ಅರ್ಜಿ ಸಲ್ಲಿಸಿದ್ದರು. ಟಿಕೆಟ್ ಘೋಷಣೆ ಬಳಿಕ ಅವರೆಲ್ಲರೂ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತು ಶ್ರಮಿಸಿದ್ದಾರೆ. ಸರಳ, ಸಜ್ಜನಿಕೆಯ ಚಂದ್ರಪ್ಪ ಕುರಿತು ಜಿಲ್ಲೆಯ ಜನರಲ್ಲಿ ಅಭಿಮಾನ ಇದ್ದು, ಅವರ ಗೆಲುವು ನಿಶ್ಚಿತವಾಗಿದ್ದು ಘೋಷಣೆಯಷ್ಟೇ ಬಾಕಿ ಉಳಿದಿದೆ ಎಂದು ಹೇಳಿದರು.












Click it and Unblock the Notifications