ಹಿಂದಿನ ಬಿಜೆಪಿ ಸರ್ಕಾರ ₹2.70 ಸಾವಿರ ಕೋಟಿ ಸಾಲ ಮಾಡಿದೆ: ಸಚಿವ ಡಿ.ಸುಧಾಕರ್ ಆರೋಪ
ಹಿರಿಯೂರು, ಫೆಬ್ರವರಿ, 05: ಹಿಂದಿನ ಬಿಜೆಪಿ ಸರ್ಕಾರದವರ ಆಡಳಿತದಲ್ಲಿ 2,70 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿ ನಮ್ಮ ಮೇಲೆ ಸಾಲ ಹೊರೆಸಿ ಹೋಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಆರೋಪಿಸಿದರು.
ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತ ಹಾಗೂ ಹೋಬಳಿ ಮಟ್ಟದ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗ ರಾಜ್ಯದ ಒಟ್ಟು ಸಾಲ ಸುಮಾರು ಐದು ಲಕ್ಷ ಕೋಟಿ ಇದೆ. ಆಡಳಿತವನ್ನು ಸರಿಯಾಗಿ ನಡೆಸದೆ ಈ ರಾಜ್ಯದಲ್ಲಿ ಅಧಿಕ ಸಾಲವನ್ನು ಮಾಡಿ ನಮ್ಮ ನಿಮ್ಮ ಮೇಲೆ ಹೊರೆಸಿ ಹೋಗಿದ್ದಾರೆ. ಇದರ ಮಧ್ಯೆಯೂ ನಾವು ಸಮರ್ಥವಾಗಿ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಜನರಿಗೆ ತಲುಪಿಸಿದ್ದೇವೆ ಎಂದರು.
ರಾಜ್ಯದ ಜನರಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ, ನಂಬಬೇಡಿ ಎಂದು ಅಪಪ್ರಚಾರ ಮಾಡಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಪಕ್ಷವನ್ನ ಲೇವಡಿ ಮಾಡಿದ್ದರು. ನಾವು ಯಾವಾಗ ಒಂದೊಂದೇ ಯೋಜನೆಗಳನ್ನು ಜನತೆಗೆ ಕೊಡಲು ಪ್ರಾರಂಭ ಮಾಡಿದ್ದೆವೋ ಆಗ ವಿರೋಧ ಪಕ್ಷಗಳು ತುಟಿ ಬಿಚ್ಚದಂತಾದವು ಎಂದರು.
ಈಗಾಗಲೇ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳುತ್ತಿದ್ದಾರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ, ಅಭಿವೃದ್ಧಿ ಮಾಡಿ ಎನ್ನುತ್ತಾರೆ. ಬಿಜೆಪಿ ಆಡಳಿತಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳು ನಿಂತು ಹೋಗುತ್ತವೆ ಎಂದರಿಗೆ ಆಡಳಿತ ಮಾಡಲು ಬರುವುದಿಲ್ಲ ಎಂದು ಅಶೋಕ್‌ಗೆ ಟಾಂಗ್ ನೀಡಿದರು.
ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಉಂಟಾಗಿರುವ ತೊಡಕುಗಳನ್ನು ಸಂಪೂರ್ಣವಾಗಿ ಬಗೆಹರಿಸಿ, ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಗಾಯಿತ್ರಿ ಡ್ಯಾಂನಲ್ಲಿ ನೀರು ಇಲ್ಲದೆ ಜೆಜಿ ಹಳ್ಳಿ ಭಾಗದ ಜನರಿಗೆ ನೀರಿನ ತೊಂದರೆ ಉಂಟಾಗಿದ್ದು, ಬೋರನಕಣಿವೆ ಡ್ಯಾಂನಿಂದ ಗಾಯಿತ್ರಿ ಜಲಾಶಯಕ್ಕೆ ಮೂರ್ನಾಲ್ಕು ಅಡಿ ನೀರು ಹರಿಸುವಂತೆ ಮುಖಂಡ ಪಾತಣ್ಣ ಒತ್ತಾಯಿಸಿದ್ದಾರೆ.
ಅದರಂತೆ ಈಗಾಗಲೇ ನೀರು ಹರಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸಭೆ ನಡೆಸುತ್ತೇನೆ. ಡ್ಯಾಂ ಚಿಕ್ಕನಾಯಕನಹಳ್ಳಿಗೆ ಸೇರಿರುವುದರಿಂದ ಅಲ್ಲಿನ ಶಾಸಕರ ಜೊತೆ ಚರ್ಚಿಸಿ, ಸಿಎಂ ಗಮನಕ್ಕೆ ತಂದು ಬೋರನಕಣಿವೆ ಜಲಾಶಯದಿಂದ ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಲ್ಲುವಳ್ಳಿ ಭಾಗದಲ್ಲಿ ಹಿಂದೆ ಒಂದು ಡಾಂಬರ್ ರಸ್ತೆಗಳಿರಲಿಲ್ಲ. ನನ್ನ ಬಿಳಿ ಕಾರು ರಸ್ತೆಯಲ್ಲಿ ಹೋದಾಗ ಕೆಂಪುಬಣ್ಣದ ಕಾರಿನಂತೆ ಕಾಣುತ್ತಿತ್ತು. ನಾನು 2008ರಿಂದ 2013ರ ಹತ್ತು ವರ್ಷಗಳ ನನ್ನ ಆಡಳಿತದಲ್ಲಿ ಹೆಚ್ಚು ಹೆಚ್ಚು ಅನುದಾನ ನೀಡಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಇದ್ದಾಗ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್‌ಗೆ ಟಾಂಗ್ ಕೊಟ್ಟರು.
ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಪೂರೈಸುವ ಮೂಲಕ ನುಡಿದಂತೆ ನಡೆದಿದ್ದು, ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ಪರವಾಗಿ, ದಲಿತರು, ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರ ಪರವಾಗಿದೆಯೆಂದು ನಿರೂಪಿಸಿದೆ ಎಂದರು.
ನಾವು ರಾಜ್ಯದ ಜನತೆಗೆ ಹತ್ತು ಕೆಜಿ ಅಕ್ಕಿ ಕೊಡಲು ಈಗಲೂ ಸಿದ್ದರಿದ್ದೇವೆ. ಆದರೆ ಕೇಂದ್ರ ಸರ್ಕಾರ ದುಡ್ಡು ಕೊಟ್ಟರೂ ಅಕ್ಕಿ ನೀಡುತ್ತಿಲ್ಲ. ಅಕ್ಕಿ ನೀಡಿದರೆ ರಾಜ್ಯ ಸರ್ಕಾರಕ್ಕೆ ಹೆಸರು ಬರುತ್ತದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ಕೊಡದೆ ನಿಲ್ಲಿಸಿದೆ. ಅಕ್ಕಿ ಬದಲಿಗೆ ಸರ್ಕಾರ ತಾತ್ಕಾಲಿಕವಾಗಿ ಖಾತೆಗಳಿಗೆ ಹಣ ನೀಡುತ್ತಾ ಬಂದಿದೆ. ಅಕ್ಕಿ ಸಿಕ್ಕ ಕೂಡಲೇ ಹತ್ತು ಕೆಜಿ ಅಕ್ಕಿ ಕೊಡಲಾಗುತ್ತದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಸುಮಾರು 67 ಸಾವಿರ ಕುಟುಂಬಗಳು ಗೃಹಜ್ಯೋತಿ ಉಪಯೋಗ ಪಡೆಯುತ್ತಿದ್ದು, ಬಹುತೇಕ ಕುಟುಂಬಗಳ ಯಜಮಾನನಿಗೆ 2 ಸಾವಿರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications