ವೈ. ಎಸ್. ವಿ. ದತ್ತ ಜೊತೆಗಿನ ಸಭೆ ವಿಫಲ; ಮುಂದೇನು?
ಚಿಕ್ಕಮಗಳೂರು, ಏಪ್ರಿಲ್ 07; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಗುರುವಾರ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ ಮಾಡಿದೆ. ಆದರೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾಗೆ ಈ ಬಾರಿಯ ಚುನಾವಣೆ ಟಿಕೆಟ್ ಸಿಕ್ಕಿಲ್ಲ. ಇದರಿಂದಾಗಿ ಅವರ ಮುಂದಿನ ನಡೆ ಏನು? ಎಂದು ಚರ್ಚೆಗಳು ಆರಂಭವಾಗಿವೆ. ಮೇ 10ರ ಬುಧವಾರ ಒಂದೇ ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಮೇ 13ರ ಶನಿವಾರ ಫಲಿತಾಂಶ ಪ್ರಕಟವಾಗಲಿದೆ.
ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಮಾರ್ಚ್ 25ರಂದು 124, ಏಪ್ರಿಲ್ 6ರಂದು 42 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಗುರುವಾರ ಬಿಡುಗಡೆಯಾದ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರಕ್ಕೆ ಆನಂದ್ ಕೆ. ಎಸ್. ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ವೈ. ಎಸ್. ವಿ. ದತ್ತಾ ಅಸಮಾಧಾನಗೊಂಡಿದ್ದಾರೆ.

ಶುಕ್ರವಾರ ಕಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಕೆ. ಎಸ್. ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಜೊತೆ ಸಂಧಾನ ಸಭೆ ನಡೆಸಿದರು. ಆದರೆ ಈ ಸಭೆ ಫಲ ನೀಡಿಲ್ಲ. ಈ ಸಭೆಯಲ್ಲಿಯೇ ದತ್ತಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ. ಕಡೂರು ಕ್ಷೇತ್ರದ ವೈ. ಎಸ್. ವಿ. ದತ್ತಾ ಅಭಿಮಾನಿಗಳು ಸಹ ಪಕ್ಷೇತರವಾಗಿ ಕಣಕ್ಕೆ ಇಳಿಯಬೇಕು ಎಂದು ಗುರುವಾರದಿಂದ ಒತ್ತಾಯಿಸುತ್ತಲೇ ಇದ್ದಾರೆ.
ಆನಂದ್ ಕೆ. ಎಸ್. ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಮನೆಗೆ ತೆರಳಿ ಅವರ ಮನವೊಲಿಸಲು ಮುಂದಾಗಿದ್ದರು. ಆದರೆ, ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ದತ್ತಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಡೂರು ಕ್ಷೇತ್ರದಲ್ಲಿ ಈ ಬಾರಿ ಭಾರೀ ರಾಜಕೀಯ ಜಿದ್ದಾಜಿದ್ದಿ ನಡೆಯುವ ಸೂಚನೆ ಕೊಟ್ಟಿದ್ದಾರೆ. ಇದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ತಲೆನೋವು ತಂದಿದೆ.

"ನನ್ನ ಬೆಂಬಲಿಗರ ತೀರ್ಮಾನವೇ ಅಂತಿಮ. ಭಾನುವಾರ ನಾನು ಬೆಂಬಲಿಗರ ಜೊತೆ ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟ ಮಾಡುತ್ತೇನೆ" ಎಂದು ವೈ. ಎಸ್. ವಿ. ದತ್ತಾ ಹೇಳಿದ್ದಾರೆ. ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುವಂತೆ ದತ್ತಾ ಅವರಿಗೆ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ಆನಂದ್ ಕೆ. ಎಸ್. ಎದುರಲ್ಲೇ ಒತ್ತಾಯ ಮಾಡಿದ್ದಾರೆ.
ಕರ್ನಾಟಕದ ಸರಳ ರಾಜಕಾರಣಿ ವೈ. ಎಸ್. ವಿ. ದತ್ತಾ 2013ರ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಆದರೆ 2018ರ ಚುನಾವಣೆಯಲ್ಲಿ 46,860 ಮತಗಳನ್ನು ಪಡೆದು ಬಿಜೆಪಿಯ ಕೆ. ಎಸ್. ಪ್ರಕಾಶ್ (62,232) ವಿರುದ್ಧ ಸೋಲು ಕಂಡಿದ್ದರು. ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 46,142 ಮತಗಳನ್ನು ಪಡೆದು 3ನೇ ಸ್ಥಾನಗಳಿಸಿದ್ದ ಆನಂದ್ ಕೆ. ಎಸ್. ಈ ಬಾರಿಯೂ ಅಭ್ಯರ್ಥಿ.
ವೈ. ಎಸ್. ವಿ. ದತ್ತಾ ಕೆಲವು ದಿನಗಳ ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಸೇರುವಾಗ ಅವರಿಗೆ ಟಿಕೆಟ್ ಖಚಿತವಾಗಿತ್ತು. ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಕಡೂರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿರಲಿಲ್ಲ. ಗುರುವಾರ 2ನೇ ಪಟ್ಟಿಯಲ್ಲಿ ಆನಂದ್ ಕೆ. ಎಸ್. ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ವೈ. ಎಸ್. ವಿ. ದತ್ತಾಗೆ ಟಿಕೆಟ್ 'ಕೈ' ತಪ್ಪಲು ಕಾರಣವೇನು? ಎಂಬುದು ಎಲ್ಲರ ಪ್ರಶ್ನೆಯಾಗಿದೆ.












Click it and Unblock the Notifications