ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ವೈಎಸ್‌ವಿ ದತ್ತಾ ಸಜ್ಜು: ದಿನಾಂಕ ನಿಗದಿ
ಚಿಕ್ಕಮಗಳೂರು,ಜನವರಿ 6: ಕಡೂರು ಕ್ಷೇತ್ರದ ಮಾಜಿ ಶಾಸಕ ಜೆಡಿಎಸ್ ಹಿರಿಯ ನಾಯಕ ವೈಎಸ್‌ವಿ ದತ್ತ ಜೆಡಿಎಸ್ ತೊರೆಯಲು ಸಿದ್ಧರಾಗಿದ್ದು, ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ. ಪ್ರಧಾನಿ ದೇವೇಗೌಡರ ಆಪ್ತರಾಗಿದ್ದ ವೈಎಸ್‌ವಿ ದತ್ತ ಜೆಡಿಎಸ್ ತೊರೆಯುವುದರ ಬಗ್ಗೆ ವೈಎಸ್‌ವಿ ದತ್ತ ಅವರ ನಿರ್ಧಾರ ಸ್ಪಷ್ಟವಾಗಿದ್ದು, ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ಕೂಡ ನಿಗದಿಯಾಗಿದೆ.
ಕಳೆದ ಐವತ್ತು ವರ್ಷಗಳಿಂದ ಮಾಜಿ ಪ್ರಧಾನಿ ದೇವೇಗೌಡರು-ನನ್ನದ್ದು ತಂದೆ ಮಕ್ಕಳ ಸಂಬಂಧ. ನಾನೆಲ್ಲೆ ಇದ್ದರೂ ಅವರ ಹಾರೈಕೆ ನನ್ನ ಮೇಲೆ ಇದ್ದೇ ಇರುತ್ತದೆ ಎಂದು ನಾನು ಜನವರಿ 15ರ ಬಳಿಕ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದತ್ತ ಅವರ ಸ್ವಗ್ರಾಮ ಯಗಟಿಯಲ್ಲಿ ಮಾತನಾಡಿದ ಅವರು, ನನ್ನನ್ನ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದೇ ದೇವೇಗೌಡರು. ಅದು ನನ್ನ ರಾಜಕೀಯ ಜೀವನಕ್ಕೆ ಸಿಕ್ಕ ತಿರುವು. ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಇನ್ನು ನಾನು ಕಾಂಗ್ರೆಸ್ ಸೇರುತ್ತಿರುವುದನ್ನು ದೇವೇಗೌಡರಿಗೆ ಹೇಳಲು ಒಂದು ರೀತಿ ಮುಜುಗರವಾಗುತ್ತದೆ. ಆದರೆ, ದೇವೇಗೌಡರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ ಎಂದು ಶಾಸಕ ವೈ.ಎಸ್.ವಿ. ದತ್ತ ಭಾವುಕರಾದರು.
ಕಡೂರಿನಲ್ಲಿ ಜನಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಳೆದ ಒಂದೂವರೆ ವರ್ಷದಿಂದಲೂ ತಾಲೂಕಿನಲ್ಲಿ ಎಲ್ಲೇ ಹೋದರೂ ಕಾಂಗ್ರೆಸ್ ಸೇರಬೇಕೆಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಹಾಗಾಗಿ, ಜನಾಭಿಪ್ರಾಯ, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ ನನ್ನ ಸಮಾನ ಮನಸ್ಕ ಸ್ನೇಹಿತರಿರುವ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷದಿಂದ ಕರೆ ಬಂದಿದ್ದು, ಜನವರಿ 15ರಂದು ಪಕ್ಷಕ್ಕೆ ಸೇರಲು ಸೂಚಿಸಿದ್ದಾರೆ. ಅಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದರು.












Click it and Unblock the Notifications