ಆನ್‌ಲೈನ್ ಜ್ಯೋತಿಷಿ ನಂಬಿ ಒಂದು ಲಕ್ಷ ಕಳೆದುಕೊಂಡ ಚಿಕ್ಕಮಗಳೂರಿನ ಮಹಿಳೆ
ಚಿಕ್ಕಮಗಳೂರು, ಅಕ್ಟೋಬರ್, 12: ಕೌಟುಂಬಿಕ ಸಮಸ್ಯೆಗೆ ಆನ್‌ಲೈನ್ ಜ್ಯೋತಿಷಿಯಿಂದ ಪರಿಹಾರ ಹುಡುಕಲು ಹೊರಟ ನಗರದ ಮಹಿಳೆಯೊಬ್ಬರು ಎರಡೇ ತಿಂಗಳಲ್ಲಿ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಆ ಮಹಿಳೆಯ ವಿವರವನ್ನು ಗೌಪ್ಯವಾಗಿ ಇಡಲಾಗಿದೆ. ಮಹಿಳೆ ಬಳಿ ಹಣವನ್ನು ಪೀಕಿದ್ದ ಖದೀಮ ಜ್ಯೋತಿಷಿ ಇದೀಗ ಚಿಕ್ಕಮಗಳೂರು ಪೊಲೀಸರ ಅತಿಥಿ ಆಗಿದ್ದಾನೆ.
ಖದೀಮ ಜ್ಯೋತಿಷಿ ಪೀಕಿದ್ದ ಹಣ ಎಷ್ಟು?
ಕೌಟುಂಬಿಕ ಕಲಹದಿಂದ ಮಾನಸಿಕ ನೆಮ್ಮದಿಯಿಂದ ಇಲ್ಲ ಎಂದು ಫೇಸ್‌ಬುಕ್‌ನಲ್ಲಿ ಪಂಡಿತ್ ಮೋದಿ ಬೆಟ್ಟಪ್ಪ ಅಸ್ಟ್ರಾಲಜಿಯ ಜಾಹಿರಾತು ನೋಡಿ ಅದರಲ್ಲಿ ಇದ್ದ ನಂಬರ್‌ಗೆ ಕರೆ ಮಾಡಿದ್ದಾಳೆ. ಪಂಡಿತ್ ಮೋದಿ ಬೆಟ್ಟಪ್ಪ ಅಸ್ಟ್ರಾಲಜಿಯ ಗಣೇಶ್ ಗೊಂದಾಲ್ ಎಂಬ 25ರ ಯುವಕ ನಿಮ್ಮ ಸಮಸ್ಯೆಗೆ ಪೂಜೆ ಮಾಡಬೇಕು ಎಂದು ಮಹಿಳೆ ಬಳಿ 3 ಸಾವಿರ ರೂ. ಹಣ ಕೇಳಿದ್ದಾನೆ.
ಆನ್‌ಲೈನ್ ಜ್ಯೋತಿಷಿ ಮೊರೆ ಹೋಗಿದ್ದ ಮಹಿಳೆ
ಮಹಿಳೆ ಕೌಟುಂಬಿಕ ಸಮಸ್ಯೆಯಿಂದ ಕಣ್ಣೀರು ಹಾಕಿಕೊಂಡು ಗೊಂದಾಲ್‌ಗೆ ಕರೆ ಮಾಡಿದ್ದಾಳೆ. ಆಗ ಅವನು ಹೆದರಬೇಡಿ ನಾನಿದ್ದೇನೆ, ನಿಮ್ಮ ಸಮಸ್ಯೆಗೆ ಮುಕ್ತಿ ಕೊಡುತ್ತೇನೆ ಎಂದು ಹೇಳಿ ಮಹಿಳೆ ಬಳಿ ಒಂದು ಲಕ್ಷ ಕಿತ್ತುಕೊಂಡಿದ್ದಾನೆ. 3, 7, 13, 22, 30 ಹೀಗೆ ಅವನಿಗೆ ಬೇಕಾದಾಗಲೆಲ್ಲಾ ರಾಮ-ಕೃಷ್ಣನ ಪೂಜೆ ಲೆಕ್ಕದಲ್ಲಿ ಹಣ ಹಾಕಿಸಿಕೊಂಡಿದ್ದಾನೆ. ಮಹಳೆ ಕುಟುಂಬದ ಕಷ್ಟ-ಕಾರ್ಪಣ್ಯ ಮುಗಿದು ಹೋಗುತ್ತದೆ ಎಂದು ಸಾಲ-ಸೋಲ ಮಾಡಿ ಕಳ್ಳ ಜ್ಯೋತಿಷಿಯ ಖಾತೆಯನ್ನು ತುಂಬಿಸಿದ್ದಾಳೆ.

ಪೊಲೀಸರ ಅತಿಥಿಯಾದ ಕಳ್ಳ ಜ್ಯೋತಿಷಿ
ಈ ಖದೀಮ ಎಲ್ಲಾ ಪೂಜೆ ಮುಗಿದಿದೆ, ನಿಮ್ಮ ಸಮಸ್ಯೆಗಾಗಿ ಕೊನೆಯ ಪೂಜೆ ಒಂದಿದೆ. ಅದನ್ನು ಮಾಡಲು ನಾನೇ ಮತ್ತೊಬ್ಬ ದೊಡ್ಡ ಜ್ಯೋತಿಷಿ ಬಳಿ ಹೋಗಬೇಕು ಎಂದು ಮತ್ತೆ ಹಣ ಕೇಳಿದ್ದಾನೆ. ಆಗ ಅನುಮಾನಗೊಂಡ ಮಹಿಳೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಬೆಂಗಳೂರಿನ ಕೊಟ್ಟಿಗೆಹಳ್ಳಿಯಲ್ಲಿ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದ 25ರ ಹರೆಯದ ಯುವಕ ಇದೀಗ ಚಿಕ್ಕಮಗಳೂರು ಪೊಲೀಸರ ಅತಿಥಿ ಆಗಿದ್ದಾನೆ. ಖದೀಮನ ಅಪ್ಪ ಕೂಡ ಜ್ಯೋತಿಷಿ ಆಗಿದ್ದಾರೆ ಎಂದು ತಿಳಿದುಬಂದಿದೆ. ವಿಳಾಸ ಕೇಳಿದರೆ ಈತ ನಾನು ಕೊಳ್ಳೆಗಾಲದವನು ಎಂದು ಬಾಯಿಬಿಟ್ಟಿದ್ದಾನೆ. ಈತ ಬೆಂಗಳೂರಿನಲ್ಲಿದ್ದುಕೊಂಡೆ ಚಿಕ್ಕಮಗಳೂರಿನ ಮಹಿಳೆಗೆ ಮೋಸ ಮಾಡಿರುವುದು ಪೊಲೀಸ್ ತನಿಖೆಯಿಂದ ಹೊರಬಂದಿದೆ. ಹಾಗಾಗಿ ಬೆಂಗಳೂರಿನ ಜನರು ಕೂಡ ಇವನ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಚಿಕ್ಕಮಗಳೂರು ಎಸ್ಪಿ ಕೂಡ ಆನ್‌ಲೈನ್ ಜ್ಯೋತಿಷಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಹೇಳಿದ್ದಾರೆ.