ಚಿಕ್ಕಮಗಳೂರು; ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು, ವರದಿ ಕೇಳಿದ ಸಚಿವ
ಚಿಕ್ಕಮಗಳೂರು, ಡಿಸೆಂಬರ್ 31; ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಘಟನೆ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಕಡೂರು ತಾಲೂಕಿನ ವಡರೇಹಳ್ಳಿ ತಾಂಡ್ಯದ ನಿವಾಸಿ 22 ವರ್ಷದ ರಂಜಿತಾ ಬಾಯಿ ಮೃತಪಟ್ಟ ಮಹಿಳೆ. ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು.

ರಂಜಿತಾ ಬಾಯಿಗೆ ಶನಿವಾರ ಮಧ್ಯಾಹ್ನ ಹೆರಿಗೆ ಆಗಿತ್ತು. ಆದರೆ ತಾಯಿಯ ಆರೋಗ್ಯದಲ್ಲಿ ರಾತ್ರಿ ಏರುಪೇರಾಗಿತ್ತು. ಈ ಬಗ್ಗೆ ಆಸ್ಪತ್ರೆ ವೈದ್ಯರಿಗೆ ಮಾಹಿತಿ ನೀಡಿದರೂ ಸಹ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸಿಲ್ಲ, ಸಕಾಲದಲ್ಲಿ ವೈದ್ಯರು ಬಂದು ತಪಾಸಣೆ ಮಾಡಿಲ್ಲ ಎಂದು ಆರೋಪಿಸಲಾಗಿದೆ.
ಹೆರಿಗೆ ಮಾಡಿಸಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಹಣ ಕೇಳುತ್ತಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ, ವೈದ್ಯರು ಸಕಾಲದಲ್ಲಿ ಬಾಣಂತಿಗೆ ಚಿಕಿತ್ಸೆ ನೀಡದ ಪರಿಣಾಮ ರಂಜಿತಾಬಾಯಿ ಮೃತಪಟ್ಟಿದ್ದಾಳೆಂದು ದೂರಿದ್ದಾರೆ.
ಬಾಣಂತಿ ಸಾವಿಗೆ ಕಾರಣರಾದವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಂಬಂಧಿಕರು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ವೈದ್ಯಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ್ದರಿಂದ ಸಂಬಂಧಿಕರು ಪ್ರತಿಭಟನೆ ಕೈಬಿಟ್ಟಿದ್ದಾರೆ.
ವರದಿ ಕೇಳಿದ ಸಚಿವರು; ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟಿರುವ ಘಟನೆಯು ಅತ್ಯಂತ ದುರಾದೃಷ್ಟಕರ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಚಿವರು ಘಟನೆಗೆ ವಿಷಾದ ವ್ಯಕ್ತಪಡಿಸುವುದರ ಜೊತೆಗೆ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಸರ್ಜನ್ ಹಾಗೂ ಜಿಲ್ಲಾಧಿಕಾರಿಗಳಿಗೆ ಘಟನೆ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ವರದಿ ಬಂದ ಬಳಿಕ ವೈದ್ಯರು, ಆರೋಗ್ಯ ಸಿಬ್ಬಂದಿಗಳಿಂದ ಕರ್ತವ್ಯ ಲೋಪವಾಗಿದ್ದರೆ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ.












Click it and Unblock the Notifications