ಚಿಕ್ಕಮಗಳೂರು ಸುತ್ತ ಕಾಡಾನೆಗಳ ಹಿಂಡು, ಶಾಲೆಗೆ ರಜೆ
ಚಿಕ್ಕಮಗಳೂರು, ಜನವರಿ 29: ಕಾಫಿನಾಡು ಚಿಕ್ಕಮಗಳೂರಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪಟ್ಟಣದ ಸಮೀಪವೇ ಕಾಡಾನೆಗಳ ಹಿಂಡು ಓಡಾಡುತ್ತಿದೆ. ವಸತಿ ಶಾಲೆಯ ಸಮೀಪ ಕಾಡಾನೆಗಳು ಕಾಣಿಸಿಕೊಂಡಿದ್ದು, ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯ ಚಿಕ್ಕಮಗಳೂರು ಪಟ್ಟಣದ ಹೊರ ವಲಯದ ಮೂಗ್ತಿಹಳ್ಳಿ ಗ್ರಾಮದ ಬಳಿ ಕಾಡಾನೆಗಳಿವೆ. ಇಲ್ಲಿ ವಸತಿ ಶಾಲೆಯೊಂದಿದೆ. ಶಾಲೆಯ ಆವರಣದಲ್ಲಿ ಗುಂಪಿನಿಂದ ಬೇರ್ಪಟ್ಟ ಸುಮಾರು 8ಕ್ಕೂ ಅಧಿಕ ಆನೆಗಳಿವೆ.

ಈ ಆನೆಗಳ ಗುಂಪಿನಲ್ಲಿ ಹಂತಕ ಸಲಗ ಎಂದೇ ಖ್ಯಾತವಾಗಿರುವ ಭೀಮ ಸಹ ಇದೆ. ಆನೆಗಳ ಹಿಂಡು ಪತ್ತೆಯಾಗಿರುವ ಕಾರಣ ಅಂಬರ್ ವ್ಯಾಲಿ ಹೆಸರಿನ ಖಾಸಗಿ ವಸತಿ ಶಾಲೆಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿ, ಸಿಬ್ಬಂದಿಗಳಿಗೆ ಹೊರ ಬಾರದಂತೆ ಎಚ್ಚರಿಸಲಾಗಿದೆ.
ಕಾಂಪೌಂಡ್ ಧ್ವಂಸ; ಕಾಡಾನೆಗಳ ಹಿಂದು ವಸತಿ ಶಾಲೆಯ ಕಾಂಪೌಂಡ್ ಧ್ವಂಸಗೊಳಿಸಿ ಶಾಲಾ ಆವರಣದ ಒಳಗೆ ಬಂದಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಬೇಲೂರು ಮಾರ್ಗವಾಗಿ ಚಿಕ್ಕಮಗಳೂರು ಹೊರವಲಯಕ್ಕೆ ಆನೆಗಳು ಬಂದಿವೆ ಎಂದು ಅಂದಾಜಿಸಲಾಗಿದೆ.
ಸುಮಾರು 8 ಕಾಡಾನೆಗಳ ತಂಡ ಎರಡು ದಿನದಿಂದ ಚಿಕ್ಕಮಗಳೂರು ಪಟ್ಟಣದ ಹೊರ ವಲಯದ ಗ್ರಾಮದಲ್ಲಿ ಸಂಚಾರ ನಡೆಸುತ್ತಿವೆ. ಆಹಾರ, ನೀರು ಅರಸಿಕೊಂಡು ಸಿಕ್ಕ-ಸಿಕ್ಕ ಕಡೆ ನುಗ್ಗುತ್ತಿವೆ. ಇದು ಜನರಿಗೆ ಆತಂಕ ತಂದಿದೆ.
ಬೇಲೂರಿನ ಬಿಕ್ಕೋಡಿನ ಬಳಿ ಬೀಡು ಬಿಟ್ಟಿದ್ದ 30 ಕಾಡಾನೆ ಹಿಂಡು ಚಿಕ್ಕಮಗಳೂರಿಗೆ ತಾಲೂಕಿಗೆ ಆಗಮಿಸಿದ್ದವು. ತಾಲೂಕಿನ ಕೆ. ಆರ್. ಪೇಟೆಯ ಮಾವಿನ ಕೆರೆ ಬಳಿ ಕಾಣಿಸಿಕೊಂಡಿದ್ದವು. ಸಾರ್ವಜನಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡಬೇಕು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿತ್ತು.
ಗ್ರಾಮದ ಸುತ್ತ-ಮುತ್ತ ಕಾಡಾನೆ ಹಿಂಡು ಸಂಚರಿಸುತ್ತಿದ್ದು, ಜನರಲ್ಲಿ ಆತಂಕವನ್ನು ಮೂಡಿಸಿದ್ದವು. ಕಳೆದ ಕೆಲ ದಿನಗಳಿಂದ ಜಿಲ್ಲೆಯ ಕೆಲ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಜನವಸತಿ ಪ್ರದೇಶದಲ್ಲಿ ಅವು ಸಂಚಾರ ನಡೆಸುತ್ತಿರುವುದು ಜನರಲ್ಲಿ ಭೀತಿ ಉಂಟುಮಾಡಿದೆ.
ಕಾಡಾನೆಗಳ ಹಿಂಡು ತೋಟ, ಭತ್ತದ ಗದ್ದೆ, ಕಬ್ಬಿನ ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಟ ಮಾಡುತ್ತಿದ್ದು, ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಜನರು ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications