ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಸಾವು: ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರ ತರಾಟೆ
ಚಿಕ್ಕಮಗಳೂರು, ನವೆಂಬರ್ 08: ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, 2 ತಿಂಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ರಾಜ್ಯ ಹೆದ್ದಾರಿ ಚಿಕ್ಕಮಗಳೂರು-ಶೃಂಗೇರಿ ಮಾರ್ಗದ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ತೋಟಗಳಿಗೆ ನುಗ್ಗುತ್ತಿರುವ ಆನೆಗಳು ಭತ್ತ, ಕಾಫಿ ಸೇರಿದಂತೆ ನಾನಾ ಬೆಳೆಗಳಿಗೆ ಹಾನಿ ಮಾಡಿವೆ. ಕಾಡಾನೆಗಳ ದಾಳಿಯಿಂದ ಬೆಳೆ ಹಾನಿಯಾಗಿದ್ದು, ರೈತರು ನಷ್ಟದ ಆತಂಕ ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಾಣಹಾನಿ ಕೂಡ ಆಗಿದೆ. ಈ ಸಂಬಂಧ ಕಾಡಾನೆಗಳ ಹಿಂಡನ್ನು ಕಾಡಿಗೆ ಓಡಿಸುವಂತೆ ಸ್ಥಳೀಯರು ಎಷ್ಟೇ ಒತ್ತಾಯಿಸಿದರು ಏನು ಪ್ರಯೋಜನ ಆಗಿಲ್ಲ.

ಅರಣ್ಯ ಇಲಾಖೆಯ ಈ ನಡೆ ವಿರುದ್ಧ ಸಿಡಿದೆದ್ದಿರುವ ಜನರು ಇಂದು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಅರಣ್ಯ ಇಲಾಖೆ ಬಳಿ ಹಳ್ಳಿಗರು ಪ್ರತಿಭಟನೆ ನಡೆದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಕಾಡಾನೆ ದಾಳಿಗೆ ಮೀನಾ ಸಾವನ್ನಪ್ಪಿದ್ದಾರೆ. 2 ತಿಂಗಳ ಹಿಂದೆ ಅರೆನೂರು ಬಳಿ ಚಿನ್ನಿ ಎಂಬುವವರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ನಿಮಗೆ ಇನ್ನೆಷ್ಟು ಬಲಿ ಬೇಕು ಎಂದು ಡಿಎಫ್‌ಓರನ್ನು ತರಾಟೆ ತೆಗೆದುಕೊಂಡು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಸ್ಥಳಕ್ಕೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಭೇಟಿ ನೀಡಿದ್ದು, ಶಾಸಕರ ಎದುರು ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಅಗಮಿಸಿದ ಡಿಎಫ್‌ಓ ಅನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೆಡೆದಾಳು ಸಮೀಪ ಕಾರ್ಮಿಕ ಮಹಿಳೆ ಮೀನಾ ಆನೆ ದಾಳಿಗೆ ಮೃತಪಟ್ಟಿದ್ದರು. ಮಹಿಳೆಯ ಮೇಲೆ ದಾಳಿ ನಡೆಸಿ ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಒತ್ತಾಯಿಸಿದ್ದರು. ಇದಕ್ಕೆ ಏನು ಕ್ರಮಕೈಗೊಳ್ಳದೆ ಇರುವ ಹಿನ್ನಲೆಯಲ್ಲಿ ಆಲ್ದೂರು ಅರಣ್ಯ ಇಲಾಖೆ ಕಚೇರಿ ಮುಂದೆ ಜನರು ಪ್ರತಿಭಟನೆ ನಡೆಸಿದ್ದಾರೆ. ಕಾಡಾನೆ ಹಾವಳಿಗೆ ತಡೆ ಹಾಕುವಂತೆ ಚಿಕ್ಕಮಗಳೂರಿಗೆ ಮೇಲಿಂದ ಮೇಲೆ ಒತ್ತಾಯಿಸುತ್ತು ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಂತೆ ಕಂಡು ಬರುತ್ತಿಲ್ಲ. ಹೀಗಾಗಿ ಇನ್ನಾದರೂ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.












Click it and Unblock the Notifications