ರಾಜ್ಯದಲ್ಲಿ 2770 "ಗ್ರಾಮ ವಾಸ್ತವ್ಯ", ನಾಲ್ಕು ಲಕ್ಷ ಕುಟುಂಬಗಳಿಗೆ ಮೂಲಸೌಲಭ್ಯಗಳ ವ್ಯವಸ್ಥೆ: ಆರ್.ಅಶೋಕ್
ಆರ್. ಅಶೋಕ್ ಅವರು ಹೇಳಿರುವ ಪ್ರಕಾರ "ಗ್ರಮವಾಸ್ತವ್ಯ"ದ ಮೂಲಕ ಇದುವರೆಗೂ ಎಷ್ಟು ಹಳ್ಳಿಗಳಿಗೆ ಮೂಲ ಸೌಕರ್ಯವನ್ನು ಕಲ್ಪಿಸಿದ್ದಾರೆ ಎನ್ನುವುದನ್ನು ನೀವೆ ನೋಡಿ.
ಚಿಕ್ಕಮಗಳೂರು, ಫೆಬ್ರವರಿ, 06: ನಾನು ಕಂದಾಯ ಸಚಿವನಾದ ನಂತರ ಇಡೀ ರಾಜ್ಯದಲ್ಲಿ ಇದುವರೆಗೆ 2770 ಗ್ರಾಮ ವಾಸ್ತವ್ಯಗಳಾಗಿದ್ದು, ನಾಲ್ಕು ಲಕ್ಷ ಕುಟುಂಬಗಳಿಗೆ ಸವಲತ್ತುಗಳನ್ನು ನೀಡಲಾಗಿದೆ ಎಂದು ಆರ್.ಅಶೋಕ್ ಹುಲಿಕೆರೆಯಲ್ಲಿ ಹೇಳಿದರು.
ಕಡೂರು ತಾಲೂಕಿನ ಹುಲಿಕೆರೆಯಲ್ಲಿ ಮಾತಾನಾಡಿದ ಅವರು, ಕಂದಾಯ ಸಚಿವನಾಗಿ ನಾನು 16 ಗ್ರಾಮ ವಾಸ್ತವ್ಯ ಮಾಡಿದ್ದೇನೆ. 71 ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಿ, ಅವುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಗೆಯೇ ಗುರುತು ಮಾಡಿರುವ ಡೀಮ್ಡ್ ಫಾರೆಸ್ಟ್‌ನಿಂದ ಕೈ ಬಿಟ್ಟಿರುವ ಪ್ರದೇಶದಲ್ಲಿ ಸಾಗುವಳಿ ಮಾಡಿರುವವರಿಗೆ "ಆ" ಜಮೀನನ್ನು ಬಿಟ್ಟುಕೊಡಲು ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಒಂಬತ್ತು ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಇತ್ತು. ಅದನ್ನು 6 ಲಕ್ಷ ಹೆಕ್ಟೇರ್‌ಗೆ ಇಳಿಸಲಾಗಿದೆ. ಆ ಜಮೀನು ಉಳುಮೆ ಮಾಡುತ್ತಿದ್ದರೆ ಅದನ್ನು ಅವರಿಗೆ ಬಿಟ್ಟುಕೊಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ದಾಖಲೆಗಳು ಮನೆ ಬಾಗಿಲಿಗೆ ಬರಲಿವೆ
ಅಂಗವಿಕಲರು, ವಿಧವಾ ವೇತನ, ವೃದ್ಯಾಪ್ಯ ವೇತನ, ಮಹಿಳೆಯರಿಗೆ ಸವಲತ್ತು ನೀಡಬೇಕು. ಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕು ಎಂಬುದು ಗ್ರಾಮ ವಾಸ್ತವ್ಯದ ಮೂಲ ಉದ್ದೇಶವಾಗಿದೆ. ಜಮೀನಿನ ಖಾತೆಯನ್ನು ಏಳು ದಿನಗಳೊಳಗೆ ಬದಲಾವಣೆ ಮಾಡಬೇಕು ಎಂದು ಆದೇಶ ನೀಡಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದರೆ ಅವರ ವಿರುದ್ಧ ಕೇಸು ಹಾಕಬಾರದು. ಈ ಸಂಬಂಧ ಕಾನೂನು ಜಾರಿಗೆ ತರಲಾಗಿದೆ. ಇನಾಮ್ ಜಮೀನನ್ನು ಯಾರೇ ಉಳುಮೆ ಮಾಡುತ್ತಿದ್ದರೂ ಅವರಿಗೆ ಖಾತೆ ಮಾಡಿಕೊಡಲಾಗುವುದು. ಹಾಗೆಯೇ ಕಂದಾಯ ದಾಖಲೆಯನ್ನು ಮನೆ ಬಾಗಿಲಿಗೆ ತಂದುಕೊಡುವ ಕೆಲಸವಾಗಿದೆ ಎಂದು ಹೇಳಿದರು.

ಗ್ರಾಮದ ಅಭಿವೃದ್ಧಿಗೆ ಕೊಟ್ಟ ಹಣ ಎಷ್ಟು?
ಗ್ರಾಮ ವಾಸ್ತವ್ಯದ ಪ್ರಯುಕ್ತ ಈ ಗ್ರಾಮದ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ನೀಡಲಾಗುವುದು. ಲಂಬಾಣಿ ತಾಂಡ ಗೊಲ್ಲರಹಟ್ಟಿಯಲ್ಲಿ ವಾಸಿಸುವ 50 ಸಾವಿರ ಕುಟುಂಬಗಳಿಗೆ ಜಮೀನು ನೋಂದಣಿ ಮಾಡಿಕೊಡಲಾಗಿದೆ. ಆಸಿಡ್ ದಾಡಿಗೆ ಒಳಗಾದವರಿಗೆ ಸಹಾಯಧನದ ಮೊತ್ತವನ್ನು 10 ಸಾವಿರಕ್ಕೆ ಏರಿಸಲಾಗಿದೆ ಎಂದರು.
ಗ್ರಾಮ ವಾಸ್ತವ್ಯದ ಉದ್ದೇಶವೇನು?
ನಂತರ ಶಾಸಕ ಸಿ.ಟಿ.ರವಿ ಮಾತನಾಡಿ, ಜನಸ್ನೇಹಿ ಆಡಳಿತ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ವಾಸ್ತವ್ಯ ಮಾಡುವ ಗ್ರಾಮಗಳಿಗೆ ಸಚಿವರು ಒಂದು ಕೋಟಿ ರೂಪಾಯಿ ಅನುದಾನ ನೀಡುತ್ತಾರೆ. ಆ ಗ್ರಾಮಗಳಲ್ಲಿ 5 ಸಾವಿರ ಫಲಾನುಭವಿಗಳಿಗೆ ಸವಲತ್ತು ವಿತರಿಸುತ್ತಾರೆ. 2018 ರಿಂದ ಇದುವರೆಗೆ ಹುಲಿಕೆರೆ ಗ್ರಾಮ ಪಂಚಾಯಿತಿಗೆ 15 ಕೋಟಿ ರೂಪಾಯಿ ನೀಡಲಾಗಿದೆ. ಅಯ್ಯನಕೆರೆಯಿಂದ ಇತರ ಕೆರೆಗಳಿಗೆ ನೀರು ತುಂಬಿಸಲು 25 ಕೋಟಿ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದರು.

ನಂತರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, "ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ" ಜಾರಿಗೆ ಬಂದ ನಂತರ ಜಿಲ್ಲೆಯ 111 ಗ್ರಾಮಗಳಿಗೆ ಭೇಟಿ ನೀಡಿ 5699 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅವುಗಳ ಪೈಕಿ 5178 ಅರ್ಜಿಗಳು ವಿಲೇವಾರಿಯಾಗಿವೆ ಎಂದರು. ಹಾಗೆಯೇ ನಂತರ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಶಾಸಕ ಸಿ.ಟಿ.ರವಿ ಅವರ ಅಭಿವೃದ್ಧಿ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಹೊಗಳಿದರು.












Click it and Unblock the Notifications