Chikkamagaluru utsav 2023: ಉತ್ತಮ ಆರೋಗ್ಯಕ್ಕೆ ಸಿರಿ ಧಾನ್ಯಗಳನ್ನು ಬಳಸಿ: ಸಿ.ಟಿ.ರವಿ
ಚಿಕ್ಕಮಗಳೂರು, ಜನವರಿ, 22: ಜಿಲ್ಲೆಯ ಜನರು ಪೂರ್ಣ ಭಾಗಿಯಾಗುತ್ತಿರುವುದರಿಂದ ಚಿಕ್ಕಮಗಳೂರು ಜಿಲ್ಲಾ ಹಬ್ಬ ಯಶಸ್ವಿಯಾಗುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಹಾಗೆಯೇ ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯವನ್ನು ಬಳಸಿ ಎಂದು ಜನರಿಗೆ ಹೇಳಿದರು.
ಚಿಕ್ಕಮಗಳೂರು ಹಬ್ಬದ ಅಂಗವಾಗಿ ನಾಲ್ಕನೇ ಶನಿವಾರ ನಗರದ ಎಐಟಿ ಕಾಲೇಜಿನ ಆವರಣದಲ್ಲಿ ಜ್ಞಾನ ವೈಭವ ಮೇಳದಲ್ಲಿ ಸಿರಿ ಧಾನ್ಯಗಳು ಉತ್ತಮ ಆರೋಗ್ಯಕ್ಕಾಗಿ ವಿಚಾರ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.
Chikkamagaluru utsav 2023: ಜನರ ಮಧ್ಯಯೇ ನಿಂತು ಕಾಫಿನಾಡಿನ ಆಹಾರ ಸವಿದ ಕೇಂದ್ರ ಸಚಿವರು
ಜಿಲ್ಲಾ ಉತ್ಸವ ಹಬ್ಬದ ಅಂಗವಾಗಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಜ್ಞಾನ ವೈಭವ, ಬೀದಿ ಉತ್ಸವಗಳಿಗೆ ಜನರು ನಿರೀಕ್ಷೆ ಮೀರಿ ಸಮಾವೇಶಗೊಳ್ಳುತ್ತಿದ್ದಾರೆ. ಉತ್ಸವ ಜನರಿಗೆ ಜ್ಞಾನ ನೀಡುವ ಹಬ್ಬವಾಗಿ ರೂಪಿಸಲಾಗಿದೆ. ಇದು ಜನರ ಭಾಗವಹಿಸುವಿಕೆಯಿಂದ ಯಶಸ್ವಿಯಾಗುತ್ತಿದೆ ಎಂದರು.
ಸಿರಿ ಧಾನ್ಯಗಳಲ್ಲಿ ಹೆಚ್ಚಿನ ನಾರಾಂಶ, ಪೋಷಾಕಾಂಶಗಳು ಇರುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಪೂರ್ವಜರು ಸಿರಿ ಧಾನ್ಯಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ಅವುಗಳನ್ನೇ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದರಿಂದ ಆಸ್ಪತ್ರೆಗಳಿಂದ ದೂರ ಇದ್ದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆರೋಗ್ಯ ರಕ್ಷಿಸಲು ಸಿರಿಧಾನ್ಯಗಳ ಕಡೆ ಗಮನ ಹರಿಸುವುದು ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.

ಹೆಚ್ಚು ವೆಚ್ಚ ಇರುವುದಿಲ್ಲ
ಪ್ರಗತಿಪರ ಕೃಷಿಕ ಕುಮಾರಸ್ವಾಮಿ ಮಾತನಾಡಿ, ಸಾವಯವ ಕೃಷಿಗೆ ಭವಿಷ್ಯದಲ್ಲಿ ಉತ್ತಮ ಬೇಡಿಕೆ ಸಿಗಲಿದೆ. ಆರಂಭದಲ್ಲಿ ಈ ಪದ್ಧತಿ ಸ್ವಲ್ಪ ಕಷ್ಟವಾದರೂ ಎರಡು ವರ್ಷದ ನಂತರ ಲಾಭದಾಯಕವಾಗಲಿದೆ. ಸಾವಯವ ಕೃಷಿಗೆ ಹೆಚ್ಚು ವೆಚ್ಚ ಇರುವುದಿಲ್ಲ. ಸಿರಿಧಾನ್ಯ ಸೇವನೆಯಿಂದ ಮಧುಮೇಹ, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಉಳಿಯಬಹುದು. ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಸಹಜವಾಗಿಯೇ ಮನುಷ್ಯನ ಆರೋಗ್ಯ ಸ್ಥಿರವಾಗಿರುತ್ತದೆ. ಸಾವಯವ ಕೃಷಿ ಮಾಡುವ ರೈತರಿಗೆ ಸರ್ಕಾರ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ
ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಬೆಂಗಳೂರು ಅಭಿವೃದ್ದಿ ವಿಚಾರದಲ್ಲಿ ಕೆಂಪೇಗೌಡರು ಸಾರ್ವಜನಿಕವಾಗಿ ಸೇವೆ ಸಲ್ಲಿಸಿ ಅಪಾರವಾದ ಕೊಡುಗೆ ನೀಡಿದ್ದಾರೆ. ದೇಶಾದ್ಯಂತ ಮನ್ನಣೆ ಗಳಿಸಿದ ಅಂತಹ ಮಹಾನೀಯರನ್ನು ನಾವು ಪ್ರತಿನಿತ್ಯ ಸ್ಮರಿಸುವಂತಾಗಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಕೆಂಪೇಗೌಡರ ಕೊಡುಗೆ ಬಹಳ ದೊಡ್ಡದು
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಒಕ್ಕಲಿಗರ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದಿ ಜಿಲ್ಲಾ ಸಂಘದಿಂದ ಶನಿವಾರ (ಜನವರಿ 21) ನಾಡಪ್ರಭು ಕೆಂಪೇಗೌಡರ 513ನೇ ಜನ್ಮದಿನಾಚರಣೆ, ಹಾಗೂ ರಾಷ್ಟ್ರಕವಿ ಕುವೆಂಪು ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಂಪೇಗೌಡರು ನಾಡಿನ ಶ್ರೇಯೋಭಿವೃದ್ದಿಗಾಗಿ ಅಂದಿನ ಸಮಯದಲ್ಲೇ ದೂರ ದೃಷ್ಟಿಯನ್ನಿಟ್ಟುಕೊಂಡು ಬೆಂದಕಾಳೂರಿಗೆ ನಗರದ ಬೆಳವಣಿಗೆ ಹಾಗೂ ಸಾವಿರಾರು ಕೆರೆಗಳನ್ನು ಅಭಿವೃಧ್ದಿಪಡಿಸುವಲ್ಲಿ ಶ್ರಮವಹಿಸಿದ್ದರು. ತಮ್ಮ ಕುಲದೇವರ ಹೆಸರಿನಲ್ಲಿ ಕೆಂಪಾಬೂದಿ ಕೆರೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕುಡಿಯುವ ನೀರನ್ನು ಒದಗಿಸಲು ಕಾರ್ಯನಿರ್ವಹಿಸಿದ್ದರು ಎಂದರು.

ಸಮಾಜದ ಬೆಳವಣಿಗೆಗೆ ಹೆಚ್ಚು ಆದ್ಯತೆ
ಕುವೆಂಪು ಅವರು ನಾಡಗೀತೆಯ ಮೂಲಕ ದೇಶ ಹಾಗೂ ನಾಡಿನ ನಡುವೆ ತಾಯಿ, ಮಗಳ ಸಂಬಂಧವನ್ನು ಸೂಚಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಕ್ಕಪಕ್ಕದ ರಾಜ್ಯಗಳನ್ನು ಸಹೋದರತ್ವದಂತೆ ಬಿಂಬಿಸುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಮುಂದಾಗಿದ್ದರು ಎಂದು ತಿಳಿಸಿದರು.
ವಿವಿಧ ಕ್ಷೇತ್ರದಲ್ಲಿ ಅನ್ಯ ಸೇವೆ ಸಲ್ಲಿಸಿದ ಈ ಇಬ್ಬರು ಮಹಾನೀಯರು ಎಂದಿಗೂ ವೈಯಕ್ತಿಕ ಆದ್ಯತೆಗಿಂತ ಹೆಚ್ಚಾಗಿ, ಸಮಾಜದ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಿದವರಾಗಿದ್ದಾರೆ. ಇವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಮೈಗೂಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ ಕುವೆಂಪು ಹಾಗೂ ಕೆಂಪೇಗೌಡರು ನಾಡಿನ ಬೆಳವಣಿಗೆಯಲ್ಲಿ ಮೇಲು-ಕೀಳು ಎನ್ನದೇ ಎಲ್ಲಾ ಜಾತೀಯ ಉದ್ದಾರಕ್ಕಾಗಿ ದುಡಿದಂತಹ ಅವಿಸ್ಮರಣಿಯರು. ಕೆಂಪೇಗೌಡರ ಶ್ರಮವು ಬೆಂಗಳೂರು ಐಟಿಬಿಟಿಯಲ್ಲಿ ದೊಡ್ಡ ನಗರವಾದರೆ, ಕುವೆಂಪು ಅವರ ಸಾಹಿತ್ಯ ವಿಶ್ವಾದ್ಯಂತ ಮನ್ನಣೆ ಗಳಿಸಿದೆ ಎಂದು ತಿಳಿಸಿದರು.












Click it and Unblock the Notifications