Chikkamagaluru utsav 2023: ಜನರ ಮಧ್ಯಯೇ ನಿಂತು ಕಾಫಿನಾಡಿನ ಆಹಾರ ಸವಿದ ಕೇಂದ್ರ ಸಚಿವರು
ಚಿಕ್ಕಮಗಳೂರು, ಜನವರಿ, 20: ಚಿಕ್ಕಮಗಳೂರು ಉತ್ಸವ ಹಿನ್ನೆಲೆ, ವಿವಿಧ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಹಾಗೆಯೇ ಆಹಾರ ಮೇಳನ್ನು ಸಹ ಏರ್ಪಡಿಸಲಾಗಿದ್ದು, ಇಲ್ಲಿ ಬಗೆಬಗೆಯ ತಿಂಡಿಗಳನ್ನು ತಯಾರು ಮಾಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮುರುಗನ್ ಸಾವಿರಾರು ಜನರ ಮಧ್ಯೆ ಜನಸಾಮಾನ್ಯರಂತೆ ಓಡಾಡಿಕೊಂಡು ಮಲೆನಾಡಿನ ತಿಂಡಿಗಳನ್ನು ಸವಿದು ಗಮನ ಸೆಳೆದರು.
ಮಲೆನಾಡಿನ ಆಹಾರ ಸವಿದ ಜೋಶಿ
ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಹಬ್ಬಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮುರುಗನ್ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೋರ್ಟ್ ಮುಂಭಾಗದ ರಸ್ತೆಯಲ್ಲಿ ಸುಮಾರು ಒಂದು ಕಿಲೋ ಮೀಟರ್‌ನಷ್ಟು ಉದ್ದವಿರುವ ಫುಡ್ ಕೋರ್ಟ್‌ನಲ್ಲಿ ಸಾವಿರಾರು ಜನಗಳ ಮಧ್ಯೆ ಜನಸಾಮಾನ್ಯರಂತೆ ಇಬ್ಬರು ಕೇಂದ್ರ ಸಚಿವರು ಓಡಾಡಿದ್ದಾರೆ. ಹೀಗೆ ಓಡಾಡುತ್ತಾ ರಸ್ತೆ ಉದ್ಧಕ್ಕೂ ಇರುವ ಅಂಗಡಿಗಳಲ್ಲಿ ಪುಳಿಯೋಗರೆ, ಮದ್ದೂರು ವಡೆ, ಹೋಳಿಗೆ, ಬಜ್ಜಿ, ಪೊಂಗಲ್, ಶಾವಿಗೆ ಬಾತ್ ರುಚಿಯನ್ನು ಸವಿದಿದ್ದಾರೆ.

ಕಾಫಿನಾಡ ಕಾಫಿ ಕುಡಿದ ಸಚಿವರು
ಅಲ್ಲದೇ ಬಳಿಕ ಕಾಫಿನಾಡ ಕಾಫಿಯ ರುಚಿಯನ್ನು ಸವಿದಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಮುರುಗನ್ ಜೊತೆ ಶಾಸಕ ಸಿ.ಟಿ. ರವಿಯೂ ರಸ್ತೆ ಮಧ್ಯೆ ನಿಂತು ತಿಂಡಿಯನ್ನು ಸವಿಯುವ ಮೂಲಕ ಗಮನ ಸೆಳೆದಿದ್ದಾರೆ. ಸಚಿವರು ಹಾಗೂ ಶಾಸಕರು ತಿಂದ ತಿಂಡಿ ತಿನಿಸುಗಳಿಗೆ ಹಣ ನೀಡಲು ಮುಂದಾಗಿದ್ದಾರೆ. ಆದರೆ ಅಂಗಡಿಯವರು ಅವರ ಬಳಿ ಹಣವನ್ನು ಪಡೆಯಲು ನಿರಾಕರಿಸಿದ್ದಾರೆ. ಆಗ ಕೇಂದ್ರ ಸಚಿವರು ಹಾಗೂ ಶಾಸಕರು ಹಣವನ್ನು ತೆಗೆದುಕೊಳ್ಳಲೇಬೇಕು ಎಂದು ತಿಂದಂತಹ ತಿಂಡಿಗಳಿಗೆ ಹಣವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪಂಚಾಯತ್ ಸಿಇಓ ಪ್ರಭು, ನಗರ ಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications