ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗೆ ಭಾಜನರಾದ ಕಾಫಿನಾಡಿನ ಶುಶ್ರೂಷಕಿಯರು
ಚಿಕ್ಕಮಗಳೂರು, ನವೆಂಬರ್ 8: ಜಿಲ್ಲೆಯ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಪಿ.ಎಸ್.ಕಾವೇರಿ, ಸಜೀದಾ ಬಾನು ಆರೋಗ್ಯ ಇಲಾಖೆಯಲ್ಲಿನ ಸೇವೆಯನ್ನು ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಪಿಎಸ್.ಕಾವೇರಿಯವರು ಇತ್ತೀಚೆಗೆ ನಿವೃತ್ತರಾಗಿದ್ದು, ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಜಾವಳಿ ಹಾಗೂ ಚಿಕ್ಕಮಗಳೂರು ತಾಲ್ಲೂಕು ಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಾಗೇ ಸಹೀದಾ ಬಾನು ಅವರು ಸದ್ಯ ತರೀಕೆರೆ ತಾಲ್ಲೂಕು ಲಕ್ಕವಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇವರ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಫ್ಲಾರೆನ್ಸ್ ಸೈಟಿಂಗೇಲ್ ಪ್ರಶಸ್ತಿನೀಡಿ ಗೌರವಿಸಲಾಗಿದೆ.
ಸುಬ್ರಾಯ ಭಟ್ಟ ಮತ್ತು ಸೀತಮ್ಮ ದಂಪತಿಯ ಪುತ್ರಿಯಾಗಿರುವ ಕಾವೇರಿ ಹಾಸನ ಜಿಲ್ಲೆಯ ಅರಕಲಗೂಡಿನ ಮಲ್ಲಿಪಟ್ಟಣದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. 2021ರಲ್ಲಿ ಚಿಕ್ಕಮಗಳೂರು ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದರು.

ಪ್ರಶಸ್ತಿ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಕಾವೇರಿ, "ಕಾಯಕ ನಿಷ್ಠೆ, ಪರಿಶ್ರಮ ಗುರುತಿಸಿ ಪ್ರಶಸ್ತಿ ನೀಡಿರುವುದು ಬಹಳ ಸಂತೋಷ ತಂದಿದೆ. ನನ್ನ ಈ ಕಾರ್ಯಕ್ಕೆ ಸಹೋದ್ಯೋಗಿಗಳು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ರೋಗಿಗಳ ಸೇವೆ ಮಾಡಿದ ತೃಪ್ತಿ ಇದೆ. 32 ವರ್ಷಗಳ ವೃತ್ತಿ ಜೀವನ ಸಾರ್ಥಕ ಭಾವ ಮೂಡಿಸಿದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
1986ರಲ್ಲಿ ಸೊಕ್ಕೆ ಗ್ರಾಮದಲ್ಲಿ ವೃತ್ತಿ ಜೀವನ ಆರಂಭಿಸಿ ಪ್ರಸ್ತುತ ಸೇವೆಯಲ್ಲಿ ಸಕ್ರಿಯರಾಗಹಿರುವ ಸಜೀದಾ ಮಾತಾನಾಡಿ "ರೋಗಿಗಳ ಶುಶ್ರೂಷೆಯಲ್ಲಿ ಸಾರ್ಥಕತೆ ಕಂಡಿದ್ದೇನೆ. ಜನರ ಆರೋಗ್ಯ ಸಂಕಷ್ಟಗಳಿಗೆ ಹಗಲಿರುಳು ಸ್ಪಂದಿಸಿದ್ದೇನೆ. ಕಾರ್ಯನಿರ್ವಹಿಸಿರುವ ಊರುಗಳಲ್ಲಿ ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ" ಎಂದು ತಿಳಿಸಿದ್ದಾರೆ..
ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು 1973ರಲ್ಲಿ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದಾದಿಯರು ಮತ್ತು ಶುಶ್ರೂಷಾ ವೃತ್ತಿಪರರು ಸಮಾಜಕ್ಕೆ ಸಲ್ಲಿಸಿದ ಶ್ಲಾಘನೀಯ ಸೇವೆಗಳನ್ನು ಗುರುತಿಸಿ ನೀಡಲಾಗುತ್ತಿದೆ. ಪ್ರಶಸ್ತಿ ವಿಜೇತರ ಪೂರ್ತಿ ಪಟ್ಟಿಯಲ್ಲಿ ನೋಡಲು ಕ್ಲಿಕ್ ಮಾಡಿ












Click it and Unblock the Notifications