ಮಳೆಯಲ್ಲಿ ಕಾರು ನಿಯಂತ್ರಣ ತಪ್ಪಿ ಚಿಕ್ಕಮಗಳೂರಿನಲ್ಲಿ ಎರಡು ಕಡೆ ಅಪಘಾತ; ಒಂದು ಸಾವು
ಚಿಕ್ಕಮಗಳೂರು, ಆಗಸ್ಟ್ 9: ಮಳೆಯಲ್ಲಿ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಎಲ್ಲೆಲ್ಲೂ ನೀರು ತುಂಬಿಕೊಂಡಿದೆ. ಹೀಗಾಗಿ ವಾಹನ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಸಮೀಪದ ಸಂಜೀವಿನಿ ಶಾಲೆ ಬಳಿ ಘಟನೆ ನಡೆದಿದ್ದು, ಸತೀಶ್ (35) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಮತ್ತೂ ಒಂದು ಘಟನೆ ಶೃಂಗೇರಿ ತಾಲೂಕಿನ ಶಿಡ್ಲೆ ಗ್ರಾಮದ ಬಳಿ ನಡೆದಿದೆ. ಮಳೆಯಲ್ಲಿ ಓಡಿಸುವಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಕಾರಿನಲ್ಲಿ ಒಟ್ಟು ಐದು ಮಂದಿ ಇದ್ದರು. ವಿಘ್ನೇಶ್ ಎಂಬುವರಿಗೆ ಗಂಭೀರ ಗಾಯವಾಗಿದ್ದು ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications