ತೇಜಸ್ವಿ ಪ್ರತಿಷ್ಠಾನದಿಂದ ಆಲೇಕಾನು ರಾಮಗಲ್ಲು ಬೆಟ್ಟಕ್ಕೆ ಚಾರಣ
ಬಣಕಲ್(ಚಿಕ್ಕಮಗಳೂರು), ಡಿಸೆಂಬರ್ 09: ಕೊಟ್ಟಿಗೆಹಾರದಲ್ಲಿರುವ ಕೆಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಪ್ರಕೃತಿ ಅಧ್ಯಯನ ಚಾರಣದ ಅಂಗವಾಗಿ ಕೊಟ್ಟಿಗೆಹಾರದಿಂದ ಆಲೇಕಾನು ರಾಮಗಲ್ಲು ಬೆಟ್ಟಕ್ಕೆ ಚಾರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಚಾರಣಿಗರು ಚಾರಣದಲ್ಲಿ ಭಾಗವಹಿಸಿದ್ದರು. 15 ಕಿ.ಮಿ ಕಾಡು ಮತ್ತು ಬಯಲು ಬೆಟ್ಟಗಳ ನಡುವೆ ಸಾಗಿದ ಚಾರಣದ ನಂತರ ರಾಮಗಲ್ಲು ಬೆಟ್ಟದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.
ಚಾರಣಿಗರಾದ ಪ್ರಹ್ಲಾದ್ ಮಾತನಾಡಿ ತೇಜಸ್ವಿಯವರ ಕೃತಿಗಳನ್ನು ಓದಿಕೊಂಡು ಅವರು ನಡೆದಾಡಿದ ಪರಿಸರದಲ್ಲಿ ಕೆಲಕಾಲ ಕಳೆಯುವ ಅವಕಾಶ ಅವಿಸ್ಮರಣೀಯವಾಗಿದ್ದು ಪ್ರಕೃತಿಯ ಸಾಮೀಪ್ಯ ಮನುಷ್ಯನಿಗೆ ಜೀವನೋತ್ಸಾಹ ಹೆಚ್ಚಿಸುತ್ತದೆ ಎಂದರು.

ಚಾರಣಿಗ ರಾಮಚಂದ್ರ ಮಾತನಾಡಿ ಬದುಕಿನ ಜಂಜಾಟಗಳ ನಡುವೆ ಬಿಡುವು ಮಾಡಿಕೊಂಡು ಹಸಿರು ಪರಿಸರ ನಡುವೆ ಕೆಲ ಸಮಯ ಇದ್ದರೆ ಬದುಕನು ಮತ್ತಷ್ಟು ಅರ್ಥಪೂರ್ಣವಾಗಿ ಜೀವಿಸುವ ಉತ್ಸಾಹ ಮೂಡುತ್ತದೆ ಎಂದರು.
ತೇಜಸ್ವಿ ಒಡನಾಡಿ ಬಾಪುದಿನೇಶ್ ಮಾತನಾಡಿ, ತೇಜಸ್ವಿ ಅವರ ಕಾರಣದಿಂದಾಗಿ ಅರಣ್ಯ ಮತ್ತು ಜೀವಸಂಕುಲದ ಬಗ್ಗೆ ಕಾಳಜಿ ವಹಿಸಬೇಕು ಎಂಬ ಅರಿವು ಹೆಚ್ಚಿದೆ. ಮುಂದಿನ ಪೀಳಿಗೆ ಸಮೃದ್ದ ಅರಣ್ಯ ಮತ್ತು ಅಪರೂಪದ ಜೀವಸಂಕುಲವನ್ನು ಉಳಿಸುವ ಅಗತ್ಯವಿದ್ದು ಚಾರಣದ ಮೂಲಕ ಪ್ರಕೃತಿಯ ಸಾಮೀಪ್ಯ ದೊರಕುವುದರಿಂದ ಪರಿಸರ ಉಳಿಸಬೇಕು ಎಂಬ ಅರಿವು ಉಂಟಾಗುತ್ತದೆ ಎಂದರು.
ಸ್ಥಳೀಯರಾದ ಸಂದೀಪ್ ಕೋಳೂರು, ಅತುಲ್ ರಾವ್, ಹರ್ಷ ಬಂಕೇನಹಳ್ಳಿ, ಸುರೇಶ್‍ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಹಾಗೂ ವಿವಿದೆಡೆಯಿಂದ ಆಗಮಿಸಿದ ಚಾರಣಿಗರು ಇದ್ದರು.












Click it and Unblock the Notifications