ಸುಂಕದಕಟ್ಟೆಯಲ್ಲಿ ಬಿರುಗಾಳಿ ಅವಾಂತರ, ಮನೆಗಳ ಮೇಲೆ ಮುರಿದುಬಿದ್ದ ಬೃಹತ್ ಮರಗಳು
ಚಿಕ್ಕಮಗಳೂರು, ಜೂನ್, 02: ಈಗಾಗಲೇ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯಿಂದ ಅದೆಷ್ಟೋ ಜನ ಮನೆ, ಮಠಗಳನ್ನು ಕಳದುಕೊಂಡು ಬೀದಿಗೆ ಬಂದಿದ್ದರೆ, ಮತ್ತೊಂದೆಡೆ ಕೃಷಿ ಬೆಳೆಗಳನ್ನು ಕಳೆದುಕೊಂಡ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅದೇ ರೀತಿ ಬಿರುಗಾಳಿಗೆ ಮನೆಗಳ ಮೇಲೆ ಬೃಹತ್ ಮರಗಳು ಬಿದ್ದಿದ್ದು, ಎರಡು ಮನೆಗಳು ಸಂಪೂರ್ಣವಾಗಿ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ನಡೆದಿದೆ.
ಕರಗುಂದ ಗ್ರಾಮದ ಮಣಿ, ಸುಂಕದಕಟ್ಟೆ ಗ್ರಾಮದ ಪ್ರಭಾಕರ್ ಎಂಬುವವರ ಮನೆಗಳ ಮೇಲೆ ಬೃಹತ್ ಮರಗಳು ಬಿದ್ದ ಪೆರಿಣಾಮ, ಮನೆಯ ಮೇಲ್ಛಾವಣಿ, ಗೋಡೆಗಳು ಸಂಪೂರ್ಣವಾಗಿ ಕುಸಿದುಬಿದ್ದಿವೆ. ಇನ್ನು ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದ್ದು, ಇದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕೂಡ ಬಿರುಗಾಳಿ ಮುಂದುವರೆದಿದ್ದು, ಇದರಿಂದ ಮಲೆನಾಡು ಭಾಗದಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಬಿರುಗಾಳಿಗೆ ನೆಲಕಚ್ಚಿದ ಬಾಳೆ ಗಿಡಗಳು
ಮುಂಗಾರು ಪೂರ್ವ ಮಳೆಯಿಂದ ಈಗಾಗಲೇ ರಾಜ್ಯದ ಹಲವೆಡೆ ಸಾಕಷ್ಟು ಅನಾಹುತಗಳೇ ಸಂಭವಿಸಿವೆ. ಅದೇ ರೀತಿ ಹುಬ್ಬಳ್ಳಿ ಜಿಲ್ಲೆಯ ಹಲವೆಡೆ ಭಾರೀ ಬಿರುಗಾಳಿ ಬೀಸಿದ್ದು, ಇದರಿಂದ ಮನೆ ಮೆಲ್ಛಾವಣಿಗಳು ಸೇರಿದಂತೆ ಕೃಷಿ ಬೆಳೆಗಳು ನಾಶವಾಗಿವೆ. ಹೀಗೆ ಬೆಳೆಗಳನ್ನು ಕಳೆದುಕೊಂಡ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ವರ್ಷವಿಡಿ ಬೆಳೆದ ಬಾಳಿ ಗಿಡಗಳು ಬಿರುಗಾಳಿ ರಬಸಕ್ಕೆ ನೆಲಸಮವಾದ ಘಟನೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ. ರೈತ ಅಪ್ಪಯ್ಯ ವಸ್ತ್ರದ ಎಂಬುವವರ ಹೊಲದಲ್ಲಿ ಸಂಜೆ ಹೊತ್ತಿಗೆ ಬೀಸಿದ ಬಿರುಗಾಳಿ ಹೊಡೆತಕ್ಕೆ ಬಾಳೆಗಿಡಗಳು ಸಂಪೂರ್ಣವಾಗಿ ನೆಲಸಮವಾಗಿ ಬಿಟ್ಟಿವೆ.
ಈ ಬಿರುಗಾರಿಯ ಹೊಡೆತಕ್ಕೆ ಸುಮಾರು ಒಂದೂವರೆ ಹೆಕ್ಟೇರ್ ಬಾಳೆ ಬೆಳೆ ನೆಲಕಚ್ಚಿಕೊಂಡುಬಿಟ್ಟಿದೆ. ವರ್ಷವಿಡೀ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ ಬಾಳೆ ಬೆಳೆಯೂ ಇನ್ನೇನು ವಾರ ಕಳೆಯುವಷ್ಟರಲ್ಲಿಯೇ ಕಟಾವ್ ಮಾಡಬೇಕಿತ್ತು. ಅಲ್ಲದೆ ಇದರಿಂದ ಸಾಲ ಹರಿಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಬದುಕಿಗೆ ಕೊಳ್ಳಿ ಇಟ್ಟಿದೆ. ಹೀಗೆ ಒಂದೇ ದಿನದಲ್ಲಿ ಭೂತದಂತೆ ಮುಳ್ಳಾಗಿ ಬಂದ ಬಿರುಗಾಳಿ ರೈತನ ಬದುಕನ್ನೇ ಕಿತ್ತುಕೊಂಡಿದೆ.
ಬಿರುಗಾಳಿ ಹೊಡೆತಕ್ಕೆ ಒಂದೂವರೆ ಹೆಕ್ಟೇರ್‌ನಲ್ಲಿ ಬೆಳೆದಿದ್ದ 500 ಬಾಳೆ ಗಿಡಗಳು ನೆಲಕಚ್ಚಿದ್ದು, ಅಂದಾಜು 5 ಲಕ್ಷ ರೂಪಾಯಿನಷ್ಟು ಹಾನಿ ಆಗಿದೆ. ಇದರಿಂದ ನೊಂದ ರೈತ ಕಣ್ಣೀರಿನಲ್ಲು ಕೈತೊಳೆಯುವಂತಾಗಿದೆ. ಆದ್ದರಿಂದ ತಾಲೂಕಿನ ದಂಡಾಧಿಕಾರಿಗಳು ಈ ರೈತನ ಗೋಳು ಆಲಿಸಿ ನೆರವಿಗೆ ಬರಬೇಕು ಎಂಬುದೇ ಜಿಲ್ಲೆಯ ಜನರ ಆಶಯವಾಗಿದೆ.
ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ
ಸಾವಿರಾರು ರೂಪಾಯಿ ಖರ್ಚು ಮಾಡಿ ಆಲೂಗಡ್ಡೆ ಬೀಜವನ್ನು ಬಿತ್ತನೆ ಮಾಡಿ 15 ದಿನ ಕಳೆದರೂ ಬೆಳೆ ಮಾತ್ರ ಕಾಣಿಸಿಕೊಂಡಿಲ್ಲ. ಇದರಿಂದ ಮನನೊಂದ ರೈತ ಜಮೀನಿನಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಇನ್ನುಳಿದ ಸಂಪೂರ್ಣ ಬೆಳೆಯನ್ನೇ ನಾಶ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಕೇವಲ 5 ದಿನಕ್ಕೆ ಬೆಳೆಯುತ್ತದೆ ಎಂದು ಹಾಸನದ ಆಲೂಗಡ್ಡೆ ಮಂಡಿಯಿಂದ ಸಿರ್ಗಾಪುರ ಗ್ರಾಮದ 60-70 ರೈತರು ಮೂರು ಲಾರಿಯಲ್ಲಿ ಆಲೂಗಡ್ಡೆ ಬೀಜವನ್ನು ತಂದಿದ್ದರು. ಆದರೆ 15 ದಿನ ಕಳೆದರೂ ಬೆಳೆ ಬಾರದ ಹಿನ್ನೆಲೆ ರೈತರೊಬ್ಬರು ತಮ್ಮ 10 ಹೆಕ್ಟೇರ್ ಜಮೀನಿನಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿ ಇನ್ನುಳಿದ ಬೆಳೆಯನ್ನು ನಾಶ ಮಾಡಿದ್ದಾರೆ. ಅಲ್ಲದೆ ಇದೀಗ ಕಳಪೆ ಗುಣಮಟ್ಟದ ಬೀಜ ಕೊಟ್ಟಿದ್ದಾರೆ ಎಂದು ಆಲೂಗಡ್ಡೆ ಮಂಡಿ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications