ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ ಹುಚ್ಚಾಟ: ಜಾರುವ ಬಂಡೆಗಳ ಮೇಲೆ ರೀಲ್ಸ್..ಡಾನ್ಸ್
ಚಿಕ್ಕಮಗಳೂರು, ಜುಲೈ 01: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಹದಿನೈದು ದಿನಗಳಿಂದ ಮಳೆಯ ಆರ್ಭಟ ಜೋರಾಗಿದೆ. ಚಿಕ್ಕಮಗಳೂರು ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯ ಅಲ್ಲಲ್ಲಿ ಚಿಕ್ಕ ಚಿಕ್ಕ ಜಲಪಾತಗಳು ಸೃಷ್ಟಿಯಾಗಿದೆ. ಇಂತಹ ಜಲಪಾತಗಳನ್ನು ನೋಡಲು ಮಳೆಗಾಲದಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಜೊತೆಗೆ ಪ್ರವಾಸಿಗರ ಹುಚ್ಚಾಟ ಕೂಡ ಮಿತಿ ಮೀರುತ್ತಿದೆ.
ಚಾರ್ಮಾಡಿ ಘಾಟಿಯಲ್ಲಿ ಜಾರುವ ಬಂಡೆಗಳ ಪ್ರವಾಸಿಗರ ಹುಚ್ಚಾಟ ಹೆಚ್ಚಾಗುತ್ತಿದ್ದು, ಜಲಪಾತಗಳ ಮಧ್ಯೆ ಹೋಗಿ ಪ್ರವಾಸಿಗರು ಮೋಜು-ಮಸ್ತಿ ಮಾಡುವ ದೃಶ್ಯಗಳು ಕಂಡು ಬರುತ್ತಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಜಲಪಾತಗಳ ಬಳಿ ಈ ಘಟನೆಗಳು ನಡೆಯುತ್ತಿದ್ದು, ಬಂಡೆಗಳ ಮೇಲೆ ಹತ್ತದಂತೆ ನಾಮಫಲಕ ಇದ್ದರೂ ಸಹ ಪ್ರವಾಸಿಗರು ಡೋಂಟ್ ಕೇರ್ ಎನ್ನುತ್ತಿದ್ದಾರೆ.

ಪ್ರವಾಸಿಗರ ಈ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಪೊಲೀಸರು ಗಸ್ತು ತಿರುಗುತ್ತಿದ್ದರೂ ಸಹ ಅವರ ಕಣ್ಣು ತಪ್ಪಿಸಿ ಬಂಡೆಗಳ ಮೇಲೆ ಹತ್ತಿ ಅಪಾಯದ ಸ್ಥಳದಲ್ಲಿ ಪ್ರವಾಸಿಗರು ಡ್ಯಾನ್ಸ್, ರೀಲ್ಸ್‌ಗಳನ್ನು ಮಾಡುತ್ತಿದ್ದಾರೆ. ಪೊಲೀಸರು ಒಂದು ಕಡೆ ಓಡಿಸಿದರೆ ಮತ್ತೊಂದು ಕಡೆ ಹೋಗಿ ಪ್ರವಾಸಿಗರು ಬಂಡೆ ಹತ್ತುತ್ತಿದ್ದಾರೆ. ಅಲ್ಲದೇ ಜಲಪಾತಗಳ ಬಳಿ ಕಾರು ಹಾಗೂ ಇತರ ವಾಹನಗಳನ್ನು ನಿಲ್ಲಿಸಿಕೊಂಡು ರಸ್ತೆ ಬದಿಯೂ ಡ್ಯಾನ್ಸ್ ಮಾಡುತ್ತಿದ್ದು, ಬೇರೆ ಪ್ರವಾಸಿಗರು ಸಂಚರಿಸಲು ತೊಂದರೆ ಕೊಡುತ್ತಿದ್ದಾರೆ.
ಚಾರ್ಮಾಡಿ ಘಾಟ್ ಜಲಪಾತಗಳ ಜಾರುವ ಬಂಡೆಗಳ ಮೇಲೆ ಸ್ವಲ್ಪ ಆಯತಪ್ಪಿದರೂ ದೊಡ್ಡ ಮಟ್ಟದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ಹಿಂದೆ ಕೆಲವರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ಇನ್ನೂ ಕೆಲವರು ಜೀವ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಸಹ ಪ್ರವಾಸಿಗರು ಇಂತಹ ಅಪಾಯ ಸ್ಥಳಗಳಲ್ಲಿ ಹುಚ್ಚಾಟ ಮೆರೆಯುತ್ತಿದ್ದಾರೆ.
ಪ್ರಾಣದ ಹಂಗು ತೊರೆದು ರೀಲ್ಸ್, ಡಾನ್ಸ್‌ನಲ್ಲೇ ಮುಳುಗುತ್ತಿರುವುದು ಗಸ್ತು ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೆ ಪ್ರವಾಸಕ್ಕೆ ಹೋಗುವವರು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅಪಾಯಕಾರಿ ಸಾಹಸಗಳನ್ನು ಮಾಡದಂತೆ ಸ್ಥಳೀಯರು ಮನವಿ ಮಾಡಿದ್ದಾರೆ.












Click it and Unblock the Notifications