ಚಿಕ್ಕಮಗಳೂರು: ಧುಮ್ಮಿಕ್ಕುತ್ತಿರುವ ಹೊನ್ನಮ್ಮನಹಳ್ಳ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ
ಚಿಕ್ಕಮಗಳೂರು, ಜುಲೈ 26: ನಿರಂತರ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಹೊಸ ಲೋಕದಂತಾಗಿದ್ದು, ಹೆಜ್ಜೆ ಹೆಜ್ಜೆಗೂ ಜಲಪಾತಗಳು ಸೃಷ್ಟಿಯಾಗಿವೆ. ಮಳೆಯ ನಡುವೆ ಮಂಜು ಮುಸುಕಿದ್ದು, ಕಾಫಿನಾಡು ಭೂಲೋಕದ ಸ್ವರ್ಗದಂತೆ ಕಾಣುತ್ತಿದೆ. ಈ ಸುಂದರವಾದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇತರ ಜಿಲ್ಲೆಗಳಿಂದ ಜನ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯಲ್ಲಿರುವ ಹೊನ್ನಮ್ಮನ ಹಳ್ಳ ಜಲಪಾತ ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಹೊನ್ನಮ್ಮನ ಹಳ್ಳ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಮೈದುಂಬಿ ಹರಿಯುತ್ತಿರುವ ಹೊನ್ನಮ್ಮಳ ಹಳ್ಳ ಜಲಪಾತ ನೋಡಲು ಪ್ರವಾಸಿಗರು ಮುಗಿಬಿದ್ದಿದ್ದಾರೆ. ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಈ ಜಲಪಾತದಲ್ಲಿಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಚಿಕ್ಕಮಗಳೂರಿನ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಕೆಲವು ಪ್ರವಾಸಿಗರು ಜಾಗ್ರತೆಯಿಂದ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿದರೆ ಇನ್ನೂ ಕೆಲವರು ಅಪಾಯದ ಸ್ಥಳಕ್ಕೆ ತೆರಳಿ ಹುಚ್ಚಾಟ ಮೆರೆಯುತ್ತಿದ್ದಾರೆ. ಹೊನ್ನಮ್ಮನ ಹಳ್ಳ ಜಲಪಾತದಲ್ಲಿ ನೀರಿನ ಮಧ್ಯೆ ನಿಂತು ಕುಣಿದು ಕುಪ್ಪಳಿಸುತ್ತಾ ಕೆಲವು ಪ್ರವಾಸಿಗರು ಅಜಾಗ್ರತೆಯಿಂದ ವರ್ತಿಸುತ್ತಿರುವುದು ಕೂಡ ಕಂಡು ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಹುತೇಕ ನದಿ, ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜೊತೆಗೆ ಗುಡ್ಡ ಕುಸಿತಗಳು ಕೂಡ ಸಂಭವಿಸುತ್ತಿದ್ದು, ಪ್ರವಾಸಿಗರು ಹಾಗೂ ಸ್ಥಳೀಯ ನಿವಾಸಿಗಳು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಹೀಗಿದ್ದರೂ ಕೂಡ ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ ಪುಂಡಾಟ ಹೆಚ್ಚುತ್ತಲೇ ಇದೆ.

ಪ್ರವಾಸಿಗರು ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಅಪಾಯಕಾರಿ ಬಂಡೆ ಮೇಲೆ ಹತ್ತಿ ಫೋಟೋ ತೆಗೆದುಕೊಳ್ಳುವ ಸಾಹಸ ಮಾಡುತ್ತಿದ್ದಾರೆ. ಸ್ವಲ್ಪ ಜಾರಿದರೂ ದೊಡ್ಡ ಮಟ್ಟದ ಅಪಾಯ ಸಂಭವಿಸುತ್ತದೆ ಎಂದು ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಮನವಿ ಮಾಡಿದರೂ ಕೂಡ ಪ್ರವಾಸಿಗರು ಮಾತ್ರ ಚಾರ್ಮಾಡಿ ಘಾಟ್‌ನ ಅಪಾಯದ ಸ್ಥಳದಲ್ಲಿರುವ ಕಲ್ಲು, ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ಹಾಗೂ ವಿಡಿಯೋ ಮಾಡುವ ಸಾಹಸ ಮಾಡುತ್ತಿದ್ದಾರೆ.












Click it and Unblock the Notifications