ಉಪಚುನಾವಣೆಯಲ್ಲಿ ಸುಮಲತಾ ಬೆಂಬಲ ನೀಡಲೇಬೇಕು; ಶೋಭಾ ಕರಂದ್ಲಾಜೆ
Recommended Video
ಚಿಕ್ಕಮಗಳೂರು, ನವೆಂಬರ್ 2: "ಬಿಜೆಪಿಯಿಂದ ಸುಮಲತಾಗೆ ನಾವು ಬೆಂಬಲ ಕೊಟ್ಟಿದ್ದೇವೆ. ಉಪಚುನಾವಣೆಯಲ್ಲಿ ಸುಮಲತಾ ನಮಗೂ ಬೆಂಬಲ ಕೊಡಲೇಬೇಕು" ಎಂದಿದ್ದಾರೆ ಸಂಸದೆ ಶೋಭಾ ಕರಂದ್ಲಾಜೆ.
ಉಪಚುನಾವಣೆಯಲ್ಲಿ ಸುಮಲತಾ ಬೆಂಬಲದ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, "ನಾವು ಬೆಂಬಲ ಕೊಟ್ಟಿದ್ದರಿಂದ ಸುಮಲತಾ ಕೂಡ ಬೆಂಬಲ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ಬೆಂಬಲಿಸಿ ಎಂದು ನಾವು ಒತ್ತಾಯ ಮಾಡುವ ಪ್ರಶ್ನೆಯೇ ಇಲ್ಲ, ಅವರೇ ಹೇಳಿದ್ದಾರೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ನನ್ನ ಬೆಂಬಲ ಎಂದು. ಈಗ ಏನು ಬದಲಾವಣೆ ಆಗಿದ್ಯೋ ಗೊತ್ತಿಲ್ಲ" ಎಂದಿದ್ದಾರೆ.
ಇದೇ ಸಂದರ್ಭ ಸಿದ್ದರಾಮಯ್ಯ ವಿರುದ್ಧವೂ ಬೈಗುಳಗಳ ಸುರಿಮಳೆಗರೆದರು. "ಸಿದ್ದರಾಮಯ್ಯ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಸಿದ್ದರಾಮಯ್ಯ. ಸಿದ್ರಾಮಯ್ಯ ಅನ್ನ ಭಾಗ್ಯ ಯೋಜನೆ ನನ್ನದು ಅಂತಾರೆ, ಸುಳ್ಳು ಹೇಳಿಕೊಂಡು ಓಡಾಡ್ತಿದ್ದಾರೆ. ಅದು ಕೇಂದ್ರ ಸರ್ಕಾರದ ಯೋಜನೆ, ಕೇಂದ್ರದ ಯೋಜನೆಯನ್ನು ನನ್ನದು ಅಂತಾರೆ, ಅವರ ಸ್ವಂತ ಸಾಧನೆ ಏನು" ಎಂದು ಪ್ರಶ್ನಿಸಿದ್ದಾರೆ.

"ಕರ್ನಾಟಕದಲ್ಲಿ ಕಾಂಗ್ರೆಸ್ ಅಧಃಪತನದಲ್ಲಿದೆ. ಸಿದ್ದರಾಮಯ್ಯ ಭಾರಿ ಭ್ರಮೆಯ್ಲಿದ್ದಾರೆ, ಕಾಂಗ್ರೆಸ್ ಅಧಃಪತನಕ್ಕೆ ಸಿದ್ದರಾಮಯ್ಯ ಕೊಡುಗೆ ಅಪಾರ, ನಿಜಕ್ಕೂ ಅವರಿಗೆ ಅಭಿನಂದನೆ ಸಲ್ಲಿಸಬೇಕು ನಾವು" ಎಂದು ವ್ಯಂಗ್ಯ ನುಡಿದಿದ್ದಾರೆ.
"ಸಿದ್ದರಾಮಯ್ಯ ಹಣಕಾಸಿನ ಪರಿಸ್ಥಿತಿ ಹದಗೆಡಿಸಿ ಹೋಗಿದ್ದಾರೆ, ಜಾತಿ ಜಾತಿಯನ್ನು ಹೊಡೆದಿದ್ದಾರೆ. ಹಿಂದುಳಿದ ವರ್ಗ, ಮುಂದುವರಿದ ವರ್ಗವನ್ನು ಹೊಡೆಯುವುದೇ ಸಿದ್ದರಾಮಯ್ಯ ಕೆಲಸ, ಧರ್ಮ ಧರ್ಮವನ್ನು ಹೊಡೆಯುವುದು, ಟಿಪ್ಪು ಜಯಂತಿ ಮಾಡುವುದು, ಮಕ್ಕಳ ಶಾಲಾ ಪ್ರವಾಸದಲ್ಲಿ ಜಾತಿ ನೋಡುವುದು ಇವೆಲ್ಲ ಸಿದ್ದರಾಮಯ್ಯನವರ ಮಹಾ ಸಾಧನೆಗಳು, ಸಿದ್ದರಾಮಯ್ಯ ದಯಮಾಡಿ ಕಾರಿನಿಂದಿಳಿದು ಮಾತನಾಡಲಿ, ಹಳ್ಳಿಗಳಲ್ಲಿ ಜನರ ಸಮಸ್ಯೆ ಆಲಿಸಲಿ" ಎಂದಿದ್ದಾರೆ.












Click it and Unblock the Notifications