ಹಿಜಾಬ್ ಬೇಡ ಎನ್ನುವವರ ಮನೆ ಹಾಳಾಗಿ ಹೋಗಲಿ; ಕಾಫಿನಾಡಲ್ಲಿ ಪೋಷಕರ ಶಾಪ
ಚಿಕ್ಕಮಗಳೂರು, ಫೆಬ್ರವರಿ 17: ನಮಗೆ ಹಿಜಾಬ್ ಬೇಕೇ ಬೇಕು, ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ. ಹಿಜಾಬ್ ಬೇಡ ಅನ್ನುವವರ ಮನೆ ಹಾಳಾಗಿ ಹೋಗಲಿ ಎಂದು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪ್ರೌಢಶಾಲೆ ಬಳಿ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಶಾಪ ಹಾಕಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ದಿನಕ್ಕೊಂದು ಶಾಲೆಯಲ್ಲಿ ಹಿಜಾಬ್ ಪರ ಹೋರಾಟ ಜನ್ಮ ತಾಳುತ್ತಿದೆ. ಇಂದಾವರ ಅಲ್ಪಸಂಖ್ಯಾರ ಶಾಲೆ, ಮೂಡಿಗೆರೆ ಪದವಿ ಪೂರ್ವ ಕಾಲೇಜು, ಮೌಂಟೇನ್ ವ್ಯೂ ಪದವಿ ಪೂರ್ವ ಕಾಲೇಜು ಹಾಗೂ ಎಂಇಎಸ್ ಕಾಲೇಜು ಬಳಿಕ ಇದೀಗ ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಬಸವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲೂ ಹಿಜಾಬ್ ಹೋರಾಟ ಆರಂಭವಾಗಿದೆ.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ದಿಢೀರನೆ ಪ್ರತಿಭಟನೆ
ಎಂದಿನಂತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ ಮಂಡಳಿ ಶಾಲೆ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಹಾಗೂ ಮಕ್ಕಳು ಸ್ಥಳದಲ್ಲೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಹಿಜಾಬ್ ನಮ್ಮ ಹಕ್ಕು, ಧರ್ಮದ ಸಂಕೇತ. ನಾವು ಪ್ರಾಣ ಹೋದರೂ ಹಿಜಾಬ್ ತೆಗೆಯುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಶಾಲಾ ಆಡಳಿತ ಮಂಡಳಿ ಕೋರ್ಟ್ ತೀರ್ಪು ಬರುವವರೆಗೆ ಕಾಯಿರಿ ಎಂದು ಮನವಿ ಮಾಡಿದರೂ, ಕೇಳುವ ತಾಳ್ಮೆ ಮಕ್ಕಳು ಹಾಗೂ ಪೋಷಕರಲ್ಲಿ ಇರಲಿಲ್ಲ. ಜಿಲ್ಲಾದ್ಯಂತ ಶಾಲಾ- ಕಾಲೇಜುಗಳ ಆವರಣದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ದಿಢೀರನೆ ಪ್ರತಿಭಟನೆಗೆ ಮುಂದಾದರು. ಬಸವನಹಳ್ಳಿ ಪ್ರೌಢ ಶಾಲೆಯಿಂದ ಮಕ್ಕಳು ಹನುಮಂತಪ್ಪ ವೃತ್ತದವರೆಗೂ ರಸ್ತೆಯಲ್ಲಿ "ಬೇಕೇ ಬೇಕು, ಹಿಜಾಬ್ ಬೇಕು' ಎಂದು ಕೂಗುತ್ತಾ ಸಾಗಿದರು. ಬಳಿಕ ಸ್ಥಳಕ್ಕೆ ಬಂದ ಪೋಷಕರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಮಕ್ಕಳನ್ನು ಅಲ್ಲೇ ಇದ್ದ ದರ್ಗಾದೊಳಗೆ ಕರೆದೊಯ್ದರು.

ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ನಿರಾಕರಣೆ
ಶಾಲಾ- ಕಾಲೇಜು ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಯಲ್ಲಿದ್ದರೂ ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು, ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ನಿರಾಕರಿಸಿದ್ದರಿಂದ ತರಗತಿಗೆ ಹಾಜರಾಗದೆ ಮನೆಗೆ ತೆರಳಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಲ್ಲಲ್ಲಿ ಗುರುವಾರ ನಡೆದಿದೆ.
ಪೊಲೀಸ್ ಇಲಾಖೆ ಫೆ.16ರ ಸಂಜೆ 6 ಗಂಟೆಯಿಂದ ಫೆ.23ರ ಸಂಜೆ 6 ಗಂಟೆಯವರೆಗೂ ಶಾಲಾ- ಕಾಲೇಜು ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ವಿಧಿಸಿ ಮುಂಜಾಗೃತ ಕ್ರಮವನ್ನು ಕೈಗೊಳ್ಳಲಾಗಿದೆ.
ಗುರುವಾರ ಶಾಲಾ ಕಾಲೇಜು ಸುತ್ತಮುತ್ತ 200 ಮೀ. ನಿಷೇಧಾಜ್ಞೆ ಇದ್ದರೂ, ನಗರದ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದರು. ಹಿಬಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು ಹಾಗೂ ಪೋಷಕರು ಬೆಂಬಲಕ್ಕೆ ನಿಂತರು.

ಹಿಜಾಬ್ ತೆಗೆಯಲು ವಿಶೇಷ ಕೊಠಡಿ ವ್ಯವಸ್ಥೆ
ಬುಧವಾರ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಹಿಜಾಬ್ ವಿವಾದ ಭಾರೀ ಸದ್ದು ಮಾಡಿದ್ದು, ಗುರುವಾರ ನ್ಯಾಯಾಲಯದ ಆದೇಶ ಮತ್ತು ನಿಷೇಧಾಜ್ಞೆಯ ನಡುವೆಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯಲು ವಿಶೇಷ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿ ಪ್ರವೇಶಿಸಿದರೇ, ಕೆಲವು ವಿದ್ಯಾರ್ಥಿನಿಯರು ವಿಶೇಷ ಕೊಠಡಿಯಲ್ಲಿ ಕುಳಿತಿದ್ದು, ಕೆಲ ಸಮಯದ ನಂತರ ಮನೆಗೆ ತೆರಳಿದರು.
ಮಲೆನಾಡು ವಿದ್ಯಾಸಂಸ್ಥೆ ಸೇರಿದಂತೆ ವಿವಿಧ ಶಾಲಾ- ಕಾಲೇಜು ಆವರಣದ ಸುತ್ತಮುತ್ತ ಬೀಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾತ್ತು. ಇನ್ನು ಕೆಲವು ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬರುವುದಾಗಿ ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರು ಶಾಲಾ- ಕಾಲೇಜುಗಳಿಗೆ ತೆರಳದೆ ಮನೆಯಲ್ಲಿ ಉಳಿದರು. ಕೆಲವು ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಿದರೂ, ಹಿಜಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಮನೆಗೆ ವಾಪಸ್ಸಾದರು.

ಮೂಡಿಗೆರೆಯಲ್ಲೂ ಭುಗಿಲೆದ್ದ ಹಿಜಾಬ್ ವಿವಾದ
ಜಿಲ್ಲೆಯ ಮೂಡಿಗೆರೆ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು ಗುರುವಾರವು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು, ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದರು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗುವಂತೆ ಕಾಲೇಜು ಪ್ರಾಂಶುಪಾಲರು ಮನವಿ ಮಾಡಿಕೊಂಡರು. ವಿದ್ಯಾರ್ಥಿನಿಯರು ತಮ್ಮ ಪಟ್ಟು ಬಿಡಲಿಲ್ಲ, ಈ ವೇಳೆ ವಿದ್ಯಾರ್ಥಿನಿಯರ ಪೋಷಕರು ಬೆಂಬಲಕ್ಕೆ ನಿಂತರು. ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸಿದ್ದರಿಂದ ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿ ಮನೆಗೆ ತೆರಳಿದರು.












Click it and Unblock the Notifications