Vande Bharat Express: ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಮತ್ತೊಮ್ಮೆ ಕಲ್ಲೇಟು
ಚಿಕ್ಕಮಗಳೂರು, ಜುಲೈ 05 : ಇತ್ತೀಚಿಗಷ್ಟೇ ಸಂಚಾರ ಆರಂಭಿಸಿದ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಿಡಿಗೇಡಿಗಳು ಮತ್ತೊಮ್ಮೆ ಕಲ್ಲು ಎಸೆದಿದ್ದಾರೆ. ಚಿಕ್ಕಮಗಳೂರಿನ ಅರಸೀಕೆರೆ ಹಾಗೂ ಬೀರೂರು ಮಧ್ಯೆ ಸಂಚರಿಸುತ್ತಿದ್ದ ವೇಳೆ ವಂದೇ ಭಾರತ್ ರೈಲಿಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ ಎಂದು ವರದಿಯಾಗಿದೆ.
ಇಂದು( ಜುಲೈ 05) ಬೆಳಗ್ಗೆ 8.45ಕ್ಕೆ ಘಟನೆ ನಡೆದಿದ್ದು, ಅರಸೀಕೆರೆ-ಬೀರೂರು ಮಾರ್ಗದಲ್ಲಿರುವ ಸ್ಲಂ ಹುಡುಗರು ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಲ್ಲು ಹೊಡೆದಿದ್ದಾರೆಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕಲ್ಲು ಹೊಡೆದ ನಿರ್ಧಿಷ್ಟ ಪ್ರದೇಶದ ಬಗ್ಗೆ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ. ಕಿಡಿಗೇಡಿಗಳ ಕೃತ್ಯಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಗಾಜಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಇನ್ನು ಕಳೆದ ಐದು ದಿನಗಳ ಅಂತರದಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಲ್ಲು ಎಸೆದಿರುವುದು ಎರಡನೇ ಘಟನೆಯಾಗಿದೆ. ಜುಲೈ 01ರ ಶನಿವಾರ ಮಧ್ಯಾಹ್ನ 3-30ಕ್ಕೆ ಧಾರವಾಡದಿಂದ ದಾವಣಗೆರೆಗೆ ಸಂಚರಿಸುತ್ತಿದ್ದ ವೇಳೆ ವಂದೇ ಭಾರತ್ ರೈಲಿಗೆ ಕಲ್ಲು ಎಸೆಯಲಾಗಿತ್ತು. ಈ ಪ್ರಕರಣ ಸಂಬಂಧ ದಾವಣಗೆರೆಯ ಆಜಾದ್ ನಗರ ಹಾಗೂ ಬಾಷಾ ನಗರದ 12 ವರ್ಷದ ಇಬ್ಬರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಚಿತ್ರದುರ್ಗದ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಾಲಕರು ರೈಲು ತೆರಳುತ್ತಿರುವಾಗ ತಮಾಷೆಗಾಗಿ ಕಲ್ಲು ಹೊಡೆದರೋ ಅಥವಾ ಇದರ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೋ ಎನ್ನುವುದು ಈವರೆಗೂ ಸ್ಪಷ್ವವಾಗಿಲ್ಲ. ಈ ಬಗ್ಗೆ ದಾವಣಗೆರೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.












Click it and Unblock the Notifications