ರಾಮಾಯಣ ಮತ್ತು ಕಿಗ್ಗದ ಋಷ್ಯಶೃಂಗ ದೇವಾಲಯಕ್ಕೆ ನಂಟು!
ಚಿಕ್ಕಮಗಳೂರು, ಜನವರಿ 15: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಿಗ್ಗದಲ್ಲಿರುವ ಶ್ರೀ ಋಷ್ಯಶೃಂಗ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ನಡೆಸಲಾಗಿದೆ.
ಚಿಕ್ಕಮಗಳೂರಿನಲ್ಲಿ ರಾಮಾಯಣ ಕಾಲದ ಪುರಾತನ ದೇವಾಲಯವೊಂದು ಇದೀಗ ಗಮನ ಸೆಳೆಯುತ್ತಿದೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಬಳಿ ಇರುವ ಪುರಾಣ ಪ್ರಸಿದ್ಧ ಋಷ್ಯಶೃಂಗ ದೇವಾಲಯಕ್ಕೂ ರಾಮಾಯಣಕ್ಕೂ ಅವಿನಾಭಾವ ನಂಟಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇದೀಗ ದೇಗುಲದಲ್ಲಿ ಸಂಭ್ರಮ ಮನೆ ಮಾಡಿದೆ.

ಪುರಾಣದ ಕಥೆಗಳು; ಪುರಾಣ ಕಥೆಗಳ ಪ್ರಕಾರ, ರಾಮಾಯಣಕ್ಕೂ ಋಷ್ಯಶೃಂಗ ದೇವಾಲಯಕ್ಕೂ ನಂಟಿದೆ. ವಿಷ್ಣುವಿನ 7ನೇ ಅವತಾರ ರಾಮನ ಜನನಕ್ಕೆ ಋಷ್ಯಶೃಂಗರು ಕಾರಣಕರ್ತರಾದವರು.
ಪುತ್ರ ಸಂತಾನವಿಲ್ಲದ ದಶರಥರಿಗಾಗಿ ಋಷ್ಯಶೃಂಗರು ಅಯೋಧ್ಯೆಗೆ ತರಳಿ ಪುತ್ರಕಾಮೇಷ್ಠಿ ಯಾಗ ಮಾಡಿದ್ದರು. ಯಾಗದ ಫಲವಾಗಿ ದಶರಥ ಮಹಾರಾಜನಿಗೆ ಪುತ್ರ ಭಾಗ್ಯ ದೊರೆತಿತ್ತು. ಯಾಗದ ಫಲವಾಗಿ ಕೌಸಲ್ಯೆಗೆ ರಾಮ, ಕೈಕೆಗೆ ಭರತ, ಸುಮಿತ್ರೆಗೆ ಲಕ್ಷ್ಮಣರ ಜನನವಾಗಿತ್ತು.
ಪುತ್ರ ಭಾಗ್ಯವಿಲ್ಲದೆ ದಶರಥ ಪರಿತಪಿಸುತ್ತಿದ್ದಾಗ ಆತನಿಗೆ ಅಯೋಧ್ಯೆಯ ಮಂತ್ರಿ ಸುಮಂತ ಋಷ್ಯಶೃಂಗರ ಮೊರೆ ಹೋಗುವಂತೆ ಸಲಹೆ ನೀಡಿದ್ದ ಎನ್ನಲಾಗಿದ್ದು ಇದೀಗ ರಾಮಮಂದಿರ ಉದ್ಘಾಟನೆ ಸಿದ್ಧವಾಗಿರುವ ಹಿನ್ನೆಲೆ ಋಷ್ಯಶೃಂಗೇಶ್ವರ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ದೇವರಿಗೆ ವಿಶೇಷ ಪೂಜೆ ಜೊತೆ ಹೋಮ ಹವನ ನಡೆಸಲಾಗಿದೆ.
ಬಿಜೆಪಿ ನಾಯಕ, ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ. ಎನ್. ಜೀವರಾಜ್ ಫೇಸ್‌ಬುಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ. ಕಿಗ್ಗಾದ ಶ್ರೀ ಶಾಂತಾ ಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಿಶೇಷ ರುದ್ರ ಪಾರಾಯಣ ಪೂಜೆ ಕಾರ್ಯಕ್ರಮದಲ್ಲಿ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ದೇವರ ಪ್ರಸಾದವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಕಳುಹಿಸಲಾಗುವುದು. ಪೇಜಾವರ ಶ್ರೀಗಳು ಈ ಪ್ರಾಸದವನ್ನು ಅಯೋಧ್ಯೆಗೆ ತಲುಪಿಸುತ್ತಾರೆ. ಶಾಂತ ಸಮೇತ ದಶರಥರ ಮಗಳು, ಪ್ರಭು ಶ್ರೀರಾಮನ ಅಕ್ಕ ಎಂದು ಹೇಳಿದ್ದಾರೆ.
ಕಿಗ್ಗಾದಲ್ಲಿರುವ ಋಷ್ಯಶೃಂಗ ದೇವಾಲಯ ಮಳೆ ದೇವರು ಎಂದೇ ಖ್ಯಾತಿ ಪಡೆದಿದೆ. ರಾಜ್ಯದಲ್ಲಿ ಮಳೆ ಕೊರತೆಯಾದಾಗ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.












Click it and Unblock the Notifications