ಧರ್ಮಸ್ಥಳಕ್ಕೆ ತೆರಳಲು ಬಸ್ ಕೊರತೆ, ತಡರಾತ್ರಿ ಪ್ರಯಾಣಿಕರ ಧರಣಿ
ಚಿಕ್ಕಮಗಳೂರು, ಡಿಸೆಂಬರ್ 10; ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಡಿಸೆಂಬರ್ 8 ರಿಂದ 12ರವರೆಗೆ ಲಕ್ಷದೀಪೋತ್ಸವ 2023ರ ಪ್ರಯುಕ್ತ ವಿವಿಧ ಕಾರ್ಯಕ್ರಮ ನಡೆಯುತ್ತಿವೆ.
ಧರ್ಮಸ್ಥಳಕ್ಕೆ ತೆರಳಲು ಚಿಕ್ಕಮಗಳೂರಿಗೆ ಆಗಮಿಸಿದ್ದ ನೂರಾರು ಭಕ್ತರು ತಡರಾತ್ರಿ ಧರಣಿ ನಡೆಸಿದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆಯಿತು. ಧರ್ಮಸ್ಥಳಕ್ಕೆ ತೆರಳಲು ಬಸ್‌ಗಾಗಿ ಕಾದ ಪ್ರಯಾಣಿಕರು ಮಧ್ಯರಾತ್ರಿ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರು ನಗರದಿಂದ ಧರ್ಮಸ್ಥಳಕ್ಕೆ ಬಸ್ ಇಲ್ಲದ ಕಾರಣ ರಾತ್ರಿ ಪ್ರಯಾಣಿಕರು ಪರದಾಡಿದರು. ಚಳಿಯಲ್ಲೇ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಮಲಗುವಂತಾಯಿತು. ಆದ್ದರಿಂದ ಪ್ರಯಾಣಿಕರು ಆಕ್ರೋಶಗೊಂಡರು.
ರಸ್ತೆ ತಡೆ ನಡೆಸಿದ ಪ್ರಯಾಣಿಕರು; ಧರ್ಮಸ್ಥಳಕ್ಕೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಕೆಲವು ಪ್ರಯಾಣಿಕರು ಕೆಎಸ್ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ವಾಗ್ವಾದವೂ ನಡೆಯಿತು. ಮುಂಜಾನೆ 4 ಗಂಟೆವರೆಗೂ ಪ್ರಯಾಣಿಕರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ಪ್ರಯಾಣಿಕರಿದ್ದರೂ ಬಸ್ ನಿಲ್ದಾಣದಲ್ಲಿ ಇದ್ದರೂ ಸಹ ಬಸ್ ಓಡಿಸುವುದಕ್ಕೆ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿದರು. ಧರ್ಮಸ್ಥಳ, ಮಂಗಳೂರು, ಉಡುಪಿ ಭಾಗದ ಪ್ರಯಾಣಿಕರು ಬಸ್ ಇಲ್ಲದೇ ಪರದಾಡುತ್ತಿದ್ದಾರೆ ಎಂದರು.
ಅಧಿಕಾರಿಗಳು ಬೆಳಗ್ಗೆ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರೂ ಸಹ ಪ್ರಯಾಣಿಕರು ಒಪ್ಪಲಿಲ್ಲ. ತಕ್ಷಣ ಬಸ್ ಓಡಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಭಾನುವಾರ ಬೆಳಗ್ಗೆ ಬಸ್ ಬಂದ ಮೇಲೆ ಎಲ್ಲರೂ ಪ್ರಯಾಣ ಬೆಳೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ 2023ರ ಸಂಭ್ರಮ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ, ಬಸ್ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಕೆಎಸ್ಆರ್‌ಟಿಸಿ ಸಹ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.
ಆದರೆ ಭಾನುವಾರ ಸರ್ಕಾರಿ ರಜೆ ದಿನವಾದ ಕಾರಣ ಹೆಚ್ಚಿನ ಭಕ್ತರು ಧರ್ಮಸ್ಥಳ ಪ್ರವಾಸ ಕೈಗೊಂಡಿದ್ದಾರೆ. ಅದರಲ್ಲೂ 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಇರುವ ಕಾರಣಕ್ಕೆ ಹೆಚ್ಚಿನ ಮಹಿಳೆಯರು ದೇವಾಲಯಕ್ಕೆ ಹೊರಟಿದ್ದು, ಚಿಕ್ಕಮಗಳೂರಿನಲ್ಲಿ ಬಸ್ ಕೊರತೆ ಉಂಟಾಯಿತು.
ಡಿಸೆಂಬರ್ 8ರಂದು 2023ನೇ ಸಾಲಿನ ಲಕ್ಷದಿಪೋತ್ಸವಕ್ಕೆ ಚಾಲನೆ ಸಿಕ್ಕಿದೆ. ಡಿಸೆಂಬರ್ 12ರ ಮಂಗಳವಾರ ರಾತ್ರಿ 12 ಗಂಟೆ ಬಳಿಕ ಲಕ್ಷದೀಪೋತ್ಸವ ನಡೆಯಲಿದೆ. ಇದನ್ನು ಕಣ್ತುಂಬಿಕೊಳ್ಳಲು ಲಕ್ಷಕ್ಕೂ ಅಧಿಕ ಭಕ್ತರು ಧರ್ಮಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದೆ.












Click it and Unblock the Notifications