ಕಾಶ್ಮೀರದಲ್ಲಿ ನೆಲೆಸಲಿದ್ದಾಳೆ ಶೃಂಗೇರಿ ಶಾರದೆ; ಮಠದಿಂದ ವಿಗ್ರಹ ಕಳುಹಿಸಲು ಒಪ್ಪಿಗೆ
ಚಿಕ್ಕಮಗಳೂರು, ಫೆಬ್ರವರಿ 4: ದೇಶದಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರ ಶೃಂಗೇರಿ ಶಾರದಾ ಪೀಠವೂ ಒಂದು. 1200 ವರ್ಷಗಳ ಹಿಂದೆ ಕಾಶ್ಮೀರದ ಶಾರದಾ ಪೀಠದಿಂದ ಶಂಕರಾಚಾರ್ಯರು ತಂದಿದ್ದಾರೆ ಎಂಬ ಐತಿಹ್ಯವಿದೆ.
ಇದೀಗ ಶಾರದಾಂಬೆ ಮೂರ್ತಿಯ ಪ್ರತಿರೂಪವನ್ನು ಶೃಂಗೇರಿ ಮಠದ ವತಿಯಿಂದ ಕಾಶ್ಮೀರದ ಶಾರದಾ ಪೀಠಕ್ಕೆ ಮಾಡಿಸಿ ಕೊಡಲು ಶೃಂಗೇರಿ ಮಠದ ಗುರುದ್ವಯರು ಒಪ್ಪಿಗೆ ಸೂಚಿಸಿದ್ದಾರೆ.
ಕಾಶ್ಮೀರ ಶಾರದಾ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಪಂಡಿತ್ ಶೃಂಗೇರಿಗೆ ಬಂದು ಮಠದ ಗುರುದ್ವಯರಾದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ ಶೃಂಗೇರಿ ಮಠದ ಗುರುದ್ವಯರು ಶೃಂಗೇರಿ ಶಾರದಾಂಬೆಯ ಮೂಲ ವಿಗ್ರಹದ ಪ್ರತಿಕೃತಿಯನ್ನು ಕಾಶ್ಮೀರ ಶಾರದಾ ಮಠಕ್ಕೆ ಕಳುಹಿಸಿಕೊಡಲು ಒಪ್ಪಿಗೆ ನೀಡಿದ್ದಾರೆ.

ಆದಿ ಶಂಕರಾಚಾರ್ಯರರು 8ನೇ ಶತಮಾನದಲ್ಲಿ ನಿರ್ಮಿಸಿದ ಶೃಂಗೇರಿ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿದೆ. ಇಲ್ಲಿ ಶಾರದೆಯು ವೀಣಾಪಾಣಿ ತುಂಗಾತೀರ ನಿವಾಸಿನಿಯಾಗಿ, ಶೃಂಗೇರಿ ಪುರವಾಸಿನಿಯಾಗಿ ಕುಳಿತಿದ್ದಾಳೆ. ಭಕ್ತರ ಸಂಕಷ್ಟಗಳನ್ನೆಲ್ಲಾ ದೂರ ಮಾಡುವ ನಂಬಿಕೆಯಿರುವ ಶಾರದಾ ದೇವಿಗೆ ರಾಜ್ಯ- ದೇಶದಲ್ಲಿ ಅಪಾರ ಭಕ್ತರ ಬಳಗವಿದೆ.
ಇದು ವಿದ್ಯಾಧಿದೇವತೆಯಾದ ಸರಸ್ವತಿ ದೇವಿಯ ದೇವಸ್ಥಾನವಾಗಿದ್ದು, ಮಗುವಿನ ಮೊದಲ ಅಕ್ಷರಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. 2ರಿಂದ 5 ವರ್ಷದೊಳಗಿನ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದು ಓಂ ನಾಮ ಬರೆಸಿ ವಿದ್ಯಾಭ್ಯಾಸ ಆರಂಭಿಸಿದರೆ, ಮಕ್ಕಳು ವಿದ್ಯಾವಂತರಾಗ್ತಾರೆ ಅನ್ನುವ ನಂಬಿಕೆ ಇದೆ. ಹೀಗಾಗಿ ಪೋಷಕರು ದೊಡ್ಡ ಸಂಖ್ಯೆಯಲ್ಲಿ ಅಕ್ಷರಾಭ್ಯಾಸಕ್ಕೆ ಮಕ್ಕಳನ್ನು ಇಲ್ಲಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಇದೀಗ ಕಾಶ್ಮೀರದಲ್ಲೂ ಶಾರದಾ ದೇವಿಯ ದೇಗುಲ ನಿರ್ಮಿಸಲು ಮುಂದಾಗಿದ್ದಾರೆ. ಈ ದೇಗುಲಕ್ಕೆ ಇಲ್ಲಿಂದಲೇ ವಿಗ್ರಹವನ್ನು ತೆಗೆದುಕೊಂಡು ಹೋಗಲಾಗುತ್ತೆದೆ.

ಪಾಕ್ ಆಕ್ರಮಿತ ಕಾಶ್ಮೀರದ ಗಡಿಯಲ್ಲಿರುವ ಕುಪ್ವಾರ ಜಿಲ್ಲೆಯ ಟ್ವಿಟಾಲ್ನಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ. 2021ರ ಡಿಸೆಂಬರ್ನಲ್ಲೇ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿದೆ. ದೇವಸ್ಥಾನ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಾರದಾ ಸೇವಾ ಸಮಿತಿ ಸದಸ್ಯರು ಶೃಂಗೇರಿಗೆ ಬಂದು ಶ್ರೀಗಳ ಜೊತೆ ಚರ್ಚಿಸಿದ್ದಾರೆ. ಶ್ರೀಮಠದ ಉಭಯ ಶ್ರೀಗಳಿಂದ ಕಾಶ್ಮೀರದ ಶಾರದಾ ದೇಗುಲ ವಿಗ್ರಹ ಕಳುಹಿಸಲು ಒಪ್ಪಿಗೆ ನೀಡಲಾಗಿದೆ.
ಹಿಂದೆ ಕಾಶ್ಮೀರಿಯಲ್ಲಿದ್ದ ಶಾರದಾ ದೇವಿ ವಿಗ್ರಹ ನಂತರ ಶೃಂಗೇರಿ ಪೀಠಕ್ಕೆ ಸೇರಿತ್ತು. ಅಂದರೆ ಮೂಲ ವಿಗ್ರಹ ಈಗ ಶೃಂಗೇರಿ ಮಠದಲ್ಲಿದೆ. ಹಾಗಾಗಿ ಅದೇ ರೂಪವನ್ನು ಹೋಲುವ ಶೃಂಗೇರಿ ಶಾರದಾಂಬೆಯ ಪ್ರತಿರೂಪದ ಮೂರ್ತಿಯನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಮಠದ ಗುರುಗಳು ಕಾಶ್ಮೀರ ಶಾರದಾ ಸೇವಾ ಸಮಿತಿಯ ರವೀಂದ್ರ ಪಂಡಿತರಿಗೆ ಭರವಸೆ ನೀಡಿದ್ದಾರೆ.
Recommended Video

ಕಾಶ್ಮೀರದಲ್ಲಿ 2021ರ ಡಿಸೆಂಬರ್ 2ರಂದೇ ಭೂಮಿ ಪೂಜೆ ನಡೆದಿದ್ದು, ದೇಗುಲದ ವಾಸ್ತುಶಿಲ್ಪ ಹಿಂದಿನ ಶಾರದಾ ಪೀಠದ ಮಾದರಿಯಲ್ಲೇ ಇರಲಿದೆ. ಶೃಂಗೇರಿ ಶಾರದಾಂಬೆ ದೇವಾಲಯ ಕಲ್ಲುಗಳಿಂದ ನಿರ್ಮಾಣವಾಗಲಿದ್ದು, ನಾಲ್ಕು ದಿಕ್ಕಿಗೂ ನಾಲ್ಕು ಬಾಗಿಲು ಇರಲಿದೆ. ಚಳಿಗಾಲ ಹೊರತುಪಡಿಸಿ ಉಳಿದ ಎಲ್ಲಾ ಕಾಲದಲ್ಲೂ ದೇವರ ದರ್ಶನಕ್ಕೆ ಅವಕಾಶ ಇರಲಿದೆ. ಕಾಶ್ಮೀರದಲ್ಲೂ ಶಾರದಾಂಬೆ ದೇಗಲ ನಿರ್ಮಾಣವಾಗ್ತಿರುವುದು ಹೆಮ್ಮೆಯ ವಿಚಾರವಾಗಿದೆ.












Click it and Unblock the Notifications