ಸಿ.ಟಿ.ರವಿಯೇ ಗೆಲ್ಲೋದು: ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಆಡಿಯೋ ವೈರಲ್
ಚಿಕ್ಕಮಗಳೂರು, ಏಪ್ರಿಲ್ 5: ಫೋನ್ ಕರೆಯಲ್ಲಿ ಮಾತನಾಡುವಾಗ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾಯದರ್ಶಿ ಸಿ.ಟಿ.ರವಿಯೇ ಗೆಲ್ಲುವುದು ಎಂದು ಹೇಳಿದ್ದಾರೆ ಎನ್ನುವ ಆರೋಪದ ಮೇಲೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಸೂಲ್ ಖಾನ್‌ನನ್ನು ಕಾಂಗ್ರೆಸ್ ಪಕ್ಷದಿಂದ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ , ರಸೂಲ್ ಖಾನ್‌ನನ್ನು ಪಕ್ಷದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಸೂಲ್ ಖಾನ್ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದರು. ಒಂದು ದಿನದ ಹಿಂದಷ್ಟೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ನೀಡಬಾರದು. ಟಿಕೆಟ್‍ಗಾಗಿ ಅರ್ಜಿ ಹಾಕಿರುವ ಆರು ಜನರಲ್ಲೇ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು.

ನಿನ್ನ ಮೊನ್ನೆ ಪಕ್ಷಕ್ಕೆ ಸೇರಿಕೊಂಡಿರುವ ಎಚ್.ಡಿ ತಮ್ಮಯ್ಯಗೆ ಟಿಕೆಟ್ ನೀಡಿದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ತಮ್ಮಯ್ಯ ವಿರುದ್ಧ ನೇರವಾಗಿ ಆಕ್ರೋಶ ಹೊರಹಾಕಿದ್ದಾರೆ. ಬುಧವಾರ ಫೋನ್‌ನಲ್ಲಿ ಮಾತನಾಡುತ್ತಾ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಯೇ ಗೆಲ್ಲುವುದು ಎಂದು ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಆ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರು ಅಸಮಧಾನ ಹೊರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮಿಗಾ ಕಾಂಗ್ರೆಸ್ ಪಕ್ಷದಿಂದ ರಸೂಲ್ ಖಾನ್‌ನನ್ನು ಅಮಾನತು ಮಾಡಿದ್ದಾರೆ. ಆಡಿಯೋದಲ್ಲಿ ಎಸ್.ಡಿ.ಪಿ.ಐ. ಪಕ್ಷ ಇಲ್ವಾ. ಅಭ್ಯರ್ಥಿ ಹಾಕಿ. ಮುಸ್ಲಿಂ ಮತಗಳು ಚದುರುತ್ತವೆ. ನೀವು ಅಭ್ಯರ್ಥಿ ಹಾಕಿ ನಿಮ್ಮ ಶಕ್ತಿ ತೋರಿಸಿ. ಸಿ.ಟಿ.ರವಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾನೆ ಎಂದು ಹೇಳಿದ್ದಾರೆ. ಈ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪಕ್ಷಕ್ಕೆ ಮುಜುಗರ ತಂದಿದ್ದಾರೆ ಎನ್ನುವ ಕಾರಣದಿಂದ ಅಮಾನತು ಮಾಡಿದ್ದಾರೆ ಎನ್ನಲಾಗಿದೆ.
ಎಸ್‍ಡಿಪಿಐ ಪಕ್ಷದ ಮುಖಂಡರೊಬ್ಬರಿಗೆ ಮೊಬೈಲ್‌ನಲ್ಲಿ ಮಾತನಾಡಿರುವ ರಸೂಲ್‍ಖಾನ್ ಎಸ್‍ಡಿಪಿಐ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲವೇ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಎಸ್‍ಡಿಪಿಐ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಹಿಂದೆ ಸರಿದಿದೆ ಎಂದಿದ್ದಾರೆ.

ಮಾತು ಮುಂದುವರೆಸಿದ ರಸೂಲ್‍ಖಾನ್ ಆ ರೀತಿಯ ಮನೋಭಾವ ಬೇಡ, ಎಸ್‍ಡಿಪಿಐನಿಂದ ಅರ್ಭರ್ಥಿಯನ್ನು ಕಣಕ್ಕಿಳಿಸಿ ನಿಮ್ಮ ಸಾಮರ್ಥ್ಯವನ್ನು ತೋರಿಸಿ, ಚಿಕ್ಕಮಗಳೂರಿನಲ್ಲಿ ಹೇಗಿದ್ದರೂ ಸಿ.ಟಿ.ರವಿನೇ ಗೆಲ್ಲೋದು ಎಂದಿದ್ದಾರೆ ಎನ್ನಲಾಗಿದೆ.
ಎಚ್.ಡಿ.ತಮ್ಮಯ್ಯ ವಿರುದ್ಧ ಮೂಲ ಕಾಂಗ್ರೆಸಿಗರ ಅಸಮಧಾನ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತರು ಅಸಮಧಾನಗೊಂಡಿದ್ದಾರೆ. ಅಭ್ಯರ್ಥಿ ಪಟ್ಟಿಯಲ್ಲಿ ಅರ್ಜಿ ಹಾಕದವರ ಹೆಸರು ಯಾಕೆ ಕೇಳಿ ಬರುತ್ತಿದೆ ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿದ್ದು, ಅರ್ಜಿ ಹಾಕಿರುವವರ ಹೆಸರು ಹೇಳಿ, ಅವರಿಗೆ ಟಿಕೆಟ್ ಕೊಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು ಪರೋಕ್ಷವಾಗಿ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಎಚ್.ಡಿ.ತಮ್ಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಎ.ಡಿ.ತಮ್ಮಯ್ಯ ಬಿಜೆಪಿ ಶಾಸಕ ಸಿ.ಟಿ. ರವಿ ಆಪ್ತರಾಗಿದ್ದರು. ಈ ಬಾರಿ ಚಿಕ್ಕಮಗಳೂರು ಕ್ಷೇತ್ರಕ್ಕೆ ತಮ್ಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗುತ್ತದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹೀಗಾಗಿ ಕಾರ್ಯಕರ್ತರು ಜಿಲ್ಲೆಯಲ್ಲಿ ಮೂಲ ಕಾಂಗ್ರೆಸ್ ನಾಯಕರಿಗೆ ಅನ್ಯಾಯವಾಗುತ್ತಿದೆ ತೀವ್ರ ಕಿಡಿಕಾರಿದ್ದಾರೆ.
ಟಿಕೆಟ್ ಬೇಕಾದವರು ಐದರಿಂದ ಹತ್ತು ವರ್ಷ ಪಕ್ಷದಲ್ಲಿ ದುಡಿಯಲಿ, ಆಮೇಲೆ ಅವರಿಗೆ ಟಿಕೆಟ್ ಕೊಡಲಿ. ಅರ್ಜಿ ಹಾಕಿಲ್ಲ, ಬಂದ ಕೂಡಲೇ ಟಿಕೆಟ್ ನೀಡುವುದು ಅಂದರೆ ಹತ್ತು-ಇಪ್ಪತ್ತು ವರ್ಷದಿಂದ ಪಕ್ಷ ಸಂಘಟನೆ ಮಾಡಿದವರು ಏನು ಮಾಡಬೇಕು ಎಂದು ಅಸಮಧಾನ ಹೊರಹಾಕಿದ್ದರು.











Click it and Unblock the Notifications