ಹುಲಿಕೆರೆ ಗ್ರಾಮದಲ್ಲಿ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ" ಹಾಡಿಗೆ ಕುಣಿದು ಕುಪ್ಪಳಿಸಿದ ಆರ್.ಅಶೋಕ್ ಹಾಗೂ ಸಿ.ಟಿ.ರವಿ
ಹುಲಿಕೆರೆಯಯಲ್ಲಿ ಸಚಿವ ಆರ್.ಅಶೋಕ್, ಶಾಸಕ ಸಿ.ಟ.ರವಿ ಹಾಗೂ ಬಿಜೆಪಿ ಕಾರ್ಯಕರ್ತರು ವೇದಿಕೆ ಮೇಲೆ ಸತ್ಯಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ, 05: ಹುಲಿಕೆರೆಯಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರ 16ನೇ ಗ್ರಾಮ ವಾಸ್ತವ್ಯ ನಡೆದಿದೆ. ಗ್ರಾಮ ವಾಸ್ತವ್ಯದ ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಚಿವ ಆರ್.ಅಶೋಕ್, ಶಾಸಕ ಸಿ.ಟ.ರವಿ ಹಾಗೂ ಬಿಜೆಪಿ ಕಾರ್ಯಕರ್ತರು ವೇದಿಕೆ ಮೇಲೆ ಸತ್ಯಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಅವರ 16ನೇ ಗ್ರಾಮ ವಾಸ್ತವ್ಯ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ. ಶನಿವಾರ (ಫೆಬ್ರವರಿ 04) ಸಂಜೆ ಏಳು ಗಂಟೆ ವೇಳೆಗೆ ಹುಲಿಕೆರೆ ಗ್ರಾಮಕ್ಕೆ ಬಂದ ಸಚಿವ ಅಶೋಕ್ ನನ್ನು ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಗ್ರಾಮ ವ್ಯಾಸ್ತವ್ಯಕ್ಕೂ ಮುನ್ನ ಸಚಿವ ಆರ್.ಅಶೋಕ್ ಹಾಗೂ ಶಾಸಕ ಸಿ.ಟಿ.ರವಿಯವರನ್ನ ಮೂರು ಕಿಲೋ ಮೀಟರ್ ಎತ್ತಿನಗಾಡಿಯಲ್ಲಿ ರೋಡ್ ಶೋ ಮಾಡಲಾಯಿತು. ಪಿಳ್ಳೇನಹಳ್ಳಿ ಗ್ರಾಮದಿಂದ ಹುಲಿಕೆರೆ ಗ್ರಾಮದವರೆಗೂ ಮೂರು ಅಲಂಕಾರಗೊಂಡ ಎತ್ತಿನಗಾಡಿ ಮೆರವಣಿಗೆಯಲ್ಲಿ ಕಂದಾಯ ಸಚಿವರನ್ನು ಕರೆತರಲಾಯಿತು.
ಎತ್ತಿನ ಗಾಡಿಯಲ್ಲಿ ಸಚಿವರ ಮೆರವಣಿಗೆ
ಗಂಗಬಸವನಹಳ್ಳಿ ಗ್ರಾಮದ ರೈತ ಅಣ್ಣೇಗೌಡ ಎಂಬುವವರ ಹಳ್ಳಿಕಾರ್ ಎತ್ತುಗಳನ್ನು ಹೂಡಿದ ಗಾಡಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಎತ್ತಿನ ಗಾಡಿಗಳು ಭಾಗಿಯಾಗಿದ್ದವು. ಸಚಿವ ಆರ್.ಅಶೋಕ್‍ಗೆ 200ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಗ್ರಾಮದ ಪ್ರವೇಶದ್ವಾರದಿಂದ ಹಿಡಿದು ಗ್ರಾಮ ದೇವತೆ ಮಾರಮ್ಮನ ದೇವಸ್ಥಾನದವರೆಗೆ ಬಂದ ಸಚಿವರು ದೇವರ ದರ್ಶನ ಪಡೆದರು. ಈ ವೇಳೆ ಗ್ರಾಮೀಣ ವಾದ್ಯಗೋಷ್ಠಿಗಳು ಮೊಳಗಿದವು. ಗ್ರಾಮೀಣ ಪ್ರದೇಶದ ಜನರ ಕಷ್ಟ ಏನೆಂದು ಗೊತ್ತಾಗಬೇಕು. ಆಗ ಮಂತ್ರಿಯಾದವರು ಸರಿಯಾಗಿ ಕೆಲಸ ಮಾಡುತ್ತಾರೆ. ಈ ಕಾರಣಕ್ಕೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂದರು.

ಗ್ರಾಮ ವಾಸ್ತವ್ಯದ ಉದ್ದೇಶವೇನು?
ಈ ಹಿಂದೆ ಸಚಿವರುಗಳು ಪ್ರವಾಸಿ ಮಂದಿರಗಳಲ್ಲಿ ಕಾಫಿ ಕುಡಿದು ಅರ್ಜಿಗಳನ್ನು ಪಡೆದುಕೊಂಡು ಹೋಗುತ್ತಿದ್ದರು. ನಾನು ಕಾಫಿ ಕುಡಿಯುವುದರ ಜೊತೆಗೆ ಅವರ ನೋವುಗಳಿಗೆ ಸ್ಪಂದಿಸುತ್ತಿದ್ದೇನೆ. ಜಿಲ್ಲೆಯಲ್ಲಿ ನಡೆಸುತ್ತಿರುವ ಗ್ರಾಮ ವಾಸ್ತವ್ಯದ ಉದ್ದೇಶವೇ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಮೊಬೈಲ್‌ನಲ್ಲೇ ದಾಖಲೆ ಪಡೆಯುವ ವ್ಯವಸ್ಥೆ
ಗ್ರಾಮ ವಾಸ್ತವ್ಯಕ್ಕೆಂದು ಜಿಲ್ಲೆಗೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ರೈತರಿಗೆ ಅನುಕೂಲವಾಗಲು ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಸರಳೀಕರಣ ಮಾಡಿ, ರೈತರು ಮೊಬೈಲ್‌ನಲ್ಲೇ ದಾಖಲೆ ಪಡೆದುಕೊಳ್ಳುವಂತಹ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ. ಗ್ರಾಮ ಲೆಕ್ಕಾಧಿಕಾರಿ ಪದನಾಮ ಬದಲಿಸಿ ಗ್ರಾಮ ಆಡಳಿತಾಧಿಕಾರಿ ಎಂದು ಮಾಡಲಾಗಿದೆ. ಪ್ರತಿ ಗ್ರಾಮದ ಆಡಳಿತಾಧಿಕಾರಿಗೆ ಟ್ಯಾಬ್ ನೀಡಲಾಗುತ್ತಿದ್ದು, ಆ ಮೂಲಕ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದರು.












Click it and Unblock the Notifications