ಕಾಶೀಹಾರ ಚುನಾವಣೆ ತನಕ ನಿಮ್ಮ ಕೊರಳಲ್ಲೇ ಇರಲಿ: ಸಿದ್ದರಾಮಯ್ಯಗೆ ಶ್ರೀಗಳ 'ಶ್ರೀರಕ್ಷೆ'
ಚಿಕ್ಕಮಗಳೂರು, ಆಗಸ್ಟ್ 19: ಅತಿವೃಷ್ಟಿಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿರುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಾಳೆಹೊನ್ನೂರಿನಲ್ಲಿರುವ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂಸ್ಥಾನ ಪೀಠಕ್ಕೆ ಭೇಟಿ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಮಠಕ್ಕೆ ಆಗಮಿಸಿದ ವಿರೋಧ ಪಕ್ಷದ ನಾಯಕನನ್ನು ಮಠದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಬರುತ್ತೇನೆ..ಬರುತ್ತೇನೆ ಎಂದು ಈಗ ಬಂದಿದ್ದೀರಿ ಎಂದು ಶ್ರೀ ಪ್ರಸನ್ನ ರೇಣುಕಾವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನಗುತ್ತಲೇ ಸಿದ್ದರಾಮಯ್ಯನವರನ್ನು ಸ್ವಾಗತಿಸಿದ್ದಾರೆ.
ಹಾರಶಾಲು ಹಾಕಿ ಸಿದ್ದರಾಮಯ್ಯನವರನ್ನು ಸ್ವಾಗತಿಸಿದ ರಂಭಾಪುರಿ ಶ್ರೀಗಳು, "ವಿಶ್ವನಾಥನ ಸನ್ನಿಧಿ ಕಾಶಿಯಿಂದ ತಂದ ಹಾರವಿದು, ಮುಂದಿನ ಚುನಾವಣೆಯ ವರೆಗೆ ನಿಮ್ಮ ಕೊರಳಲ್ಲೇ ಇದ್ದರೆ ಒಳ್ಳೆಯದು" ಎಂದು ಕಾಶಿಹಾರವನ್ನು ಸಿದ್ದರಾಮಯ್ಯನವರ ಕೊರಳಿಗೆ ಹಾಕಿದ್ದಾರೆ.

ಮುಖ್ಯಮಂತ್ರಿಯಾಗಿ ಎಂದು ಆಶೀರ್ವದಿಸಿ ಗುರುಗಳೇ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಆಗ್ರಹಿಸಿದಾಗ, ನಗುತ್ತಲೇ ಶ್ರೀಗಳು ಸ್ಮರಣಿಕೆಯೊಂದನ್ನು ನೀಡಿದ್ದಾರೆ. ಇಲ್ಲಿಗೆ ಬಂದದ್ದು ನನ್ನ ಪುಣ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವೀರಭದ್ರನಾಥ ಸ್ವಾಮಿ, ರೇಣುಕಾಚಾರ್ಯರ ಗದ್ದುಗೆಯ ದರ್ಶನ ಪಡೆದ ಸಿದ್ದರಾಮಯ್ಯ, ಮಠಕ್ಕೆ ಬರುವ ಮುನ್ನ ಶೃಂಗೇರಿ ಶಾರದಾಂಬೆಯ ಸನ್ನಿದಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದರು.

ರಂಭಾಪುರಿ ಶ್ರೀಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, "ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ಕೆಲವರು ನನ್ನನ್ನ ದಾರಿ ತಪ್ಪಿಸಿದರು. ಇನ್ನು ಯಾವತ್ತೂ ಧರ್ಮದ ವಿಷಯಕ್ಕೆ ಹೋಗುವುದಿಲ್ಲ" ಎನ್ನುವ ಮಾತನ್ನು ಶ್ರೀಗಳ ಜೊತೆಗಿನ ಮಾತುಕತೆಯ ವೇಳೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications