ಚಿಕ್ಕಮಗಳೂರು; ಅರ್ಧಕ್ಕೆ ನಿಂತಿದೆ ಬೃಹತ್ ಸೇತುವೆ ಕಾಮಗಾರಿ
ಚಿಕ್ಕಮಗಳೂರು, ನವೆಂಬರ್ 27: ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರಿನ ಸೇತುವೆ ದಾಟಿಯೇ ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ ಸೇರಿದಂತೆ ನೂರಾರು ಹಳ್ಳಿಗಳಿಗೆ ತೆರಳಬೇಕು. ಆದರೆ ಈ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ಸೇತುವೆ ಮೇಲೆ ನೀರು ನಿಲ್ಲುತ್ತದೆ. ಕೆಳಭಾಗದಲ್ಲಿ ನೀರು ಸೋರಿಕೆಯಾಗುತ್ತದೆ.
ಸೇತುವೆಯ ಕಂಬಗಳ ಬಳಿ ಮರಗಿಡ ಬೆಳೆದು ಸೇತುವೆ ಆಯಸ್ಸು ಕಡಿಮೆ ಆಗಿದೆ ಎನ್ನುವುದು ಸಾಬೀತಾಗಿದೆ. ಆದರೆ ಸೇತುವೆ ಪರಿಶೀಲಿನೆ ನಡೆಸಿದ ಅಧಿಕಾರಿಗಳು ಸೇತುವೆ ಗಟ್ಟಿಮುಟ್ಟಾಗಿದೆ. ಓಡಾಡಬಹುದು ಎಂದು ವರದಿ ನೀಡಿದ್ದಾರೆ. ಆದರೂ, ಸ್ಥಳೀಯರ ಆತಂಕ ದೂರಾಗಿರಲಿಲ್ಲ.

ಅರ್ಧಕ್ಕೆ ನಿಂತ ಕಾಮಗಾರಿ; ಸರ್ಕಾರ ಮುಂಜಾಗೃತ ಕ್ರಮವಾಗಿ ಹೊಸ ಸೇತುವೆಗೆ 2017ರಲ್ಲೇ ಶಂಕುಸ್ಥಾಪನೆ ಮಾಡಿ ಕೋಟ್ಯಾಂತರ ರೂಪಾಯಿ ಅನುದಾನ ಕೊಟ್ಟಿದೆ. ಆದರೆ, ಅರ್ಧ ಕೆಲಸವೂ ಆಗಿಲ್ಲ. ಸೇತುವೆ ನಿರ್ಮಾಣಕ್ಕೆ ತಂದಿಟ್ಟ ವಸ್ತುಗಳು ತುಕ್ಕು ಹಿಡಿಯುತ್ತಿವೆ.
ಸರ್ಕಾರ ಸೇತುವೆ ಕೆಲಸ ಮುಗಿಸುವುದಕ್ಕೆ ಮುಂದಾಗಿಲ್ಲ. ಹಾಗಾಗಿ, ಸ್ಥಳೀಯರು ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿ ಕೂಡಲೇ ಸೇತುವೆ ಕೆಲಸ ಮುಗಿಸುವಂತೆ ಆಗ್ರಹಿಸಿದ್ದಾರೆ. ಹಳೇ ಸೇತುವೆಗೆ ಭವಿಷ್ಯವಿಲ್ಲ. ಯಾವಾಗ ಏನಾಗುತ್ತದೋ? ಎಂದು ಸ್ಥಳೀಯರು ಸರ್ಕಾರಕ್ಕೆ ದುಂಬಾಲು ಬಿದ್ದು ಹೊಸ ಸೇತುವೆಗೆ ನಿರ್ಮಾಣಕ್ಕೆ ಆಗ್ರಹಿಸಿದ್ದರು.
ಅದರಂತೆ 18 ಕೋಟಿ ವೆಚ್ಚದಲ್ಲಿ ಹೊಸ ಸೇತುವೆಗೆ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡಿದ್ದರು. ಒಂದಷ್ಟು ಹಣವೂ ಬಿಡುಗಡೆಯಾಗಿತ್ತು. ಕೆಲಸವೂ ಆರಂಭವಾಗಿತ್ತು. ಭದ್ರಾ ನದಿ ಮಧ್ಯೆ ಪಿಲ್ಲರ್ ಹಾಗೂ ಬೀಮ್ ಮಟ್ಟಕ್ಕೆ ಏರಿಸಿ ಕೆಲಸ ನಿಲ್ಲಿಸಿದ್ದರು. ಶಾಸಕ ರಾಜೇಗೌಡ ಗುತ್ತಿಗೆದಾರರನ್ನು ತೆಗೆದುಕೊಂಡ ಮೇಲೆ ಮತ್ತಷ್ಟು ಕೆಲಸ ಮಾಡಿ ಬೀಮ್ ಮಟ್ಟಕ್ಕೆ ಏರಿಸಿದರು. ಇದೀಗ ಮತ್ತೆ ಕೆಲಸ ನಿಲ್ಲಿಸಿದ್ದಾರೆ.
ಸರ್ಕಾರ ಸೂಕ್ತವಾಗಿ ಹಣ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರ ಹಣವಿಲ್ಲದೆ ಕೆಲಸ ನಿಲ್ಲಿಸಿದ್ದಾರೆ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಕೂಡಲೇ ಹಣ ಬಿಡುಗಡೆಗೆ ಆಗ್ರಹಿಸಿದ್ದಾರೆ. ಸೇತುವೆ ಮೇಲೆ ಭಾರೀ ವಾಹನಗಳಿಗೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಹಳೇ ಸೇತುವೆ ಗಟ್ಟಿ ಇದೆ ಎನ್ನುತ್ತಾರೆ. ಆದರೆ 125 ವರ್ಷಗಳ ಹಿಂದೆ ಸುಣ್ಣದಕಲ್ಲು-ಬೆಲ್ಲದ ಪಾಕದಿಂದ ಮಾಡಿದ ಸೇತುವೆಗೆ ಒಂದು ವೇಳೆ ಸಮಸ್ಯೆಯಾದರೆ ಶೃಂಗೇರಿ, ಬಾಳೆಹೊನ್ನೂರು ರಂಭಾಪುರಿ ಪೀಠ, ಹೊರನಾಡು, ಕಳಸ, ಎನ್. ಆರ್. ಪುರ ಭಾಗದ ಜನರು ಅಂತಂತ್ರಗೊಳ್ಳಲಿದ್ದಾರೆ.
ಒಟ್ಟಾರೆ, ಭದ್ರಾ ನದಿಗೆ 125 ವರ್ಷಗಳ ಹಿಂದೆ ಬ್ರಿಟಿಷರು ಕಟ್ಟಿದ್ದ ಸೇತುವೆಯೇ ಇಂದಿನ ಮಲೆನಾಡಿಗರ ಜೀವನಾಡಿಯಾಗಿದೆ. ಸದ್ಯಕ್ಕೆ ಅಧಿಕಾರಿಗಳು ಸೇತುವೆ ಬಳಕೆ ಮಾಡಿ ಎನ್ನುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ಭದ್ರೆಯ ಒಡೆಲು ಭಯಂಕರ ಎಂಬ ಮಾತಿದೆ. ಸ್ವಲ್ಪ ಹೆಚ್ಚುಕಮ್ಮಿಯಾದರೂ ಮಲೆನಾಡಿಗರ ಭವಿಷ್ಯ ತೂಗುಯ್ಯಾಲೆಯಾಗೋದು ಗ್ಯಾರಂಟಿ.
ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಅರ್ಧಕ್ಕೆ ನಿಂತಿರೋ ಹೊಸ ಸೇತುವೆ ಕಾಮಗಾರಿಗೆ ಕಾರಣವೇನೆಂದು ತಿಳಿದು, ಹಣದ ಸಮಸ್ಯೆಯಾಗಿದ್ದರೆ ಕೂಡಲೇ ಹಣ ನೀಡಿ ಸೇತುವೆ ಕೆಲಸ ಮುಗಿಸಿದರೆ ಮಲೆನಾಡಿನ ಸಾವಿರಾರು ಜನ ನಿಟ್ಟುಸಿರು ಬಿಡುವುದು ಗ್ಯಾರಂಟಿ.












Click it and Unblock the Notifications