ಈ ಊರಿಗೆ ರಸ್ತೆ ಇಲ್ಲ, ಕಂಕಣ ಭಾಗ್ಯ ಕೂಡಿ ಬರ್ತಿಲ್ಲ!
ಚಿಕ್ಕಮಗಳೂರು, ಮಾರ್ಚ್ 29; ಹಳ್ಳಿಯ ರಸ್ತೆ ಸರಿ ಇಲ್ಲ ಎನ್ನುವ ಕಾರಣಕ್ಕೆ ಚಿಕ್ಕಮಗಳೂರು ತಾಲೂಕಿನ ಬೆರಣಗೋಡು ಗ್ರಾಮದ ಯುವಕರು, ಯುವತಿಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಊರಿಗೆ ಹೆಣ್ಣುಕೊಡಲು, ಊರಿನ ಹೆಣ್ಣು ಮಕ್ಕಳನ್ನು ವಿವಾಹವಾಗಲು ಯಾರೂ ಸಹ ಮುಂದೆ ಬರುತ್ತಿಲ್ಲ.
ಬೆರಣಗೋಡು ಗ್ರಾಮ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಸುಮಾರು 22 ಕಿ. ಮೀ. ದೂರದಲ್ಲಿದೆ. ಈ ಗ್ರಾಮ ಚಿಕ್ಕಮಗಳೂರು ತಾಲೂಕಿಗೆ ಸೇರಿದರೂ ಇಲ್ಲಿನ ಜನ ಮತ ಹಾಕೋದು ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ. ಈ ಗ್ರಾಮದಲ್ಲಿ ಈಗ 30 ವರ್ಷ ವಯಸ್ಸಿನ ಯುವಕರು ನಮ್ಮ ಊರಿಗೆ ರಸ್ತೆ ಆಗಿದ್ದು ನಮಗೆ ಗೊತ್ತೇ ಇಲ್ಲ ಅಂತಾರೆ.
ಇಳಿವಯಸ್ಸಿನವರು ನಾನು ಚಿಕ್ಕ ಹುಡುಗ ಇದ್ದಾಗ ರಸ್ತೆ ಮಾಡಿದ್ದ ನೆನೆಪು ಅಂತಾರೆ. ಹಿಡಿಗಾತ್ರದ ಕಲ್ಲಿನ ರಸ್ತೆಯೇ ಇವರಿಗೆ ದಾರಿ. ಜೊತೆಗೆ ರಸ್ತೆ ಮಧ್ಯೆ ಕಲ್ಲಿನ ಬಂಡೆಗಳು ಇವೆ. ರಸ್ತೆ ಸುಮಾರು ಅರ್ಧ ಅಡಿ ಗುಂಡಿ ಕೂಡ ಬಿದ್ದಿದೆ. ಇಲ್ಲಿನ ನಿವಾಸಿಗಳು ನಮಗೊಂದು ರಸ್ತೆ ನಿರ್ಮಿಸಿಕೊಡಿ ಎಂದು ಸರ್ಕಾರಕ್ಕೆ ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಯಾವುದೇ ಪ್ರಯೋಜನವಿಲ್ಲ. ಮಳೆಗಾಲದಲ್ಲಿ ಇಲ್ಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಸಹ ಸಾಹಸ.

ಇಲ್ಲಿನ ಜನ ಮಳೆಗಾಲದಲ್ಲಿ ಬೈಕಿನಲ್ಲಿ ಬಿದ್ದು, ಎದ್ದು ಹೋಗದ ದಿನವಿಲ್ಲ. ಹಳ್ಳಿಯ ರಸ್ತೆ ಸರಿ ಇಲ್ಲ ಅನ್ನೋ ಕಾರಣಕ್ಕೆ ಈ ಊರಿಗೆ ಶಿಕ್ಷಕರು ಕೂಡ ಬರೋದಕ್ಕೆ ಹಿಂದೆ-ಮುಂದೆ ನೋಡುತ್ತಾರೆ. ಈ ದುರ್ಗಮ ಹಾದಿಯಲ್ಲಿ ಬರುವಾಗ ಶಿಕ್ಷಕರು ಕೂಡ ಬೈಕಿನಲ್ಲಿ ಬಿದ್ದು ಸುಮಾರು 15 ದಿನಗಳ ಕಾಲ ಶಾಲೆಗೆ ಬರದಂತೆ ಆದ ಘಟನೆಗಳು ನಡೆದಿವೆ.
ಇಲ್ಲಿನ ನಿವಾಸಿಗಳು ಹುಣಸೇಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆವರೆಗಾದರೂ ಸೂಕ್ತ ರಸ್ತೆ ನಿರ್ಮಿಸಿ ಕೊಡಿ ಎಂದು ಅಂಗಲಾಚುತ್ತಿದ್ದಾರೆ. ಆದರೆ ಸರ್ಕಾರ ಶಾಸಕರು ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಸುಮಾರು 150-200 ಮನೆಗಳ ಈ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮದುವೆ ವಯಸ್ಸು ಮೀರಿದ ಯುವಕ, ಯುವತಿಯರಿದ್ದಾರೆ.

ಆದರೆ ರಸ್ತೆ ಸರಿ ಇಲ್ಲ ಅನ್ನೋ ಕಾರಣಕ್ಕೆ ಅವರಿಗೆ ಮದುವೆ ಭಾಗ್ಯವೇ ಇಲ್ಲ ಅಂತಾರೆ ಸ್ಥಳೀಯರು. ವಧು-ವರರ ಕಡೆಯವರು ಬರುತ್ತಾರೆ. ಬಂದು ನೋಡುತ್ತಾರೆ. ಆಮೇಲೆ ಅವರ ಅಭಿಪ್ರಾಯ ಹೇಳುವುದಿಲ್ಲ. ತೀರಾ ಬಲವಂತವಾಗಿ ಫೋನ್ ಮಾಡಿ ಕೇಳಿದರೆ, ನಿಮ್ಮೂರಿಗೆ ಬೇರೆ ರಸ್ತೆ ಇಲ್ಲ ಎಂಬ ಉತ್ತರ ಬರುತ್ತದೆ.
ಹಾಗಾಗೆ, ರಸ್ತೆ ಸರಿ ಇಲ್ಲ ಅನ್ನೋ ಕಾರಣಕ್ಕೆ ಈ ಊರಿನ ಯುವಕ-ಯುವತಿಯರಿಗೆ ಮದುವೆ ಭಾಗ್ಯ ಇಲ್ಲದಂತಾಗಿದೆ. ಈ ಭಾಗದಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತೆ. ಆಗ ಇಲ್ಲಿ ಓಡಾಡುವುದು ಅಸಾಧ್ಯ. ಹಾಗಾಗಿ, ಕಳೆದ ಐದಾರು ವರ್ಷಗಳಿಂದ ಮಳೆಗಾಲಕ್ಕೂ ಮುಂಚೆ ಸ್ಥಳಿಯರೇ ಹಣ ಹಾಕಿಕೊಂಡು ರಸ್ತೆಗೆ ತಾತ್ಕಾಲಿಕವಾಗಿ ಮಣ್ಣನ್ನು ಹಾಕಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಊರಿನ ಜನ ನಮ್ಮ ಊರಿಗೊಂದು ಸೂಕ್ತ ರಸ್ತೆ ನಿರ್ಮಿಸಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಗ್ರಾಮ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಗೆ ಬರಲಿದೆ. ವಿಧಾನಸಭಾ ಕ್ಷೇತ್ರ ಮೂಡಿಗೆರೆಯದ್ದು. ಇತ್ತ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ, ಇತ್ತ ಇವರು ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ಅಧಿಕಾರಿಗಳು ಆ ಬಗ್ಗೆ ಯೋಚನೆ ಕೂಡ ಮಾಡುತ್ತಿಲ್ಲ.
ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ವ್ಯವಸ್ಥೆಯ ಬೇಜವಾಬ್ದಾರಿಯಿಂದ ಬೇಸತ್ತಿರೋ ಹಳ್ಳಿಗರು ದಯವಿಟ್ಟು ನಮಗೊಂದು ರಸ್ತೆ ನಿರ್ಮಿಸಿಕೊಡಿ ಎಂದು ಮನವಿಕೊಂಡಿದ್ದಾರೆ.












Click it and Unblock the Notifications