ಕಾಫಿನಾಡಿನಲ್ಲಿ ನಕ್ಸಲ್ ಯುಗಾಂತ್ಯ!; ನಕ್ಸಲ್ ನಾಯಕರೆಲ್ಲರ ಸದ್ದಡಗಿಸಿದ ಖಾಕಿ ಪಡೆ
ಚಿಕ್ಕಮಗಳೂರು, ಏಪ್ರಿಲ್ 15: ಒಂದು ಕಾಲದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿದ ನಕ್ಸಲ್ ಚಟುವಟಿಕೆ ಇದೀಗ ತಣ್ಣಗಾಗಿದೆ. ಅದರಲ್ಲೂ ಮಲೆನಾಡಿನ ನಕ್ಸಲ್ ಚಳವಳಿಯ ಸೂತ್ರಧಾರ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಬಂಧನವಾಗುತ್ತಿದ್ದಂತೆ ಪೊಲೀಸರು ಕೂಡ ನಿರುಮ್ಮಳರಾಗಿದ್ದಾರೆ. ಸೂತ್ರಧಾರರ ಬಂಧನದ ಮೂಲಕ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆದಾರರ ನೆಲ ಕಳಚಿಬಿದ್ದಿದೆ.
ಚಿಕ್ಕಮಗಳೂರು ಪಶ್ಚಿಮ ಘಟ್ಟಗಳ ರಮಣೀಯ ಪ್ರಕೃತಿಯ ಬೀಡು. ಎತ್ತ ಕಣ್ಣಾಯಿಸಿದರೂ ಸುಂದರ ಪರಿಸರ ಕಣ್ಣಿಗೆ ರಾಚುತ್ತದೆ. ಇದೇ ಪರಿಸರವೇ ಒಂದು ಕಾಲದಲ್ಲಿ ನಕ್ಸಲ್ ಹುಟ್ಟಿಗೆ ಕಾರಣವಾಗಿತ್ತು. ನಕ್ಸಲ್ ಚಟುವಟಿಕೆ ಮಲೆನಾಡಿನಲ್ಲಿ ಬೇರೂರಲು ವೇದಿಕೆ ಮಾಡಿಕೊಟ್ಟಿತ್ತು ಅನ್ನುವುದು ಕೂಡ ಅಷ್ಟೇ ಸತ್ಯ.

ನಕ್ಸಲ್ ಸೂತ್ರಧಾರ ಬಿ.ಜಿ. ಕೃಷ್ಣಮೂರ್ತಿ
ನಕ್ಸಲ್ ಸೂತ್ರಧಾರ ಬಿ.ಜಿ. ಕೃಷ್ಣಮೂರ್ತಿ ಸೇರಿದಂತೆ ಹಲವರು ಇದೇ ಕಾಡಿನಲ್ಲಿ ಭೂಗತರಾಗುವ ಮೂಲಕ ಪೊಲೀಸರಿಗೆ ಸೆಡ್ಡು ಹೊಡೆದು ಅನೇಕ ಯುವಕರನ್ನು ನಕ್ಸಲ್ ಲೋಕದಲ್ಲಿ ಸಕ್ರಿಯರಾಗಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಎನ್.ಆರ್. ಪುರ, ಕೊಪ್ಪದ ಸುತ್ತಮುತ್ತ ಅನೇಕ ವಿಧ್ವಂಸಕ ಕೃತ್ಯಗಳನ್ನು ಎಸಗಿ ಪೊಲೀಸರಿಗೆ ಸವಾಲೆಸೆದಿದ್ದರು. ಆ ಬಳಿಕ ನಕ್ಸಲ್ ನಿಗ್ರಹ ದಳ ಹುಟ್ಟಿಕೊಂಡ ಬಳಿಕ ಚಿಕ್ಕಮಗಳೂರು ಜಿಲ್ಲೆ, ರಾಜ್ಯದಿಂದಲೇ ಕಾಲ್ಕಿತ್ತ ನಕ್ಸಲ್ ಪಡೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ ಸೇರಿ ಹಲವೆಡೆ ತೆರಳಿ ಯುವಕ- ಯುವತಿಯರನ್ನು ನಕ್ಸಲ್ ಕಡೆ ಸೆಳೆದಿದ್ದರು.

ಬಿ.ಜಿ. ಕೃಷ್ಣಮೂರ್ತಿ ಇದೀಗ ಪೊಲೀಸರ ಅತಿಥಿ
ಹೀಗೆ ಒಂದು ಕಾಲದಲ್ಲಿ ಪೊಲೀಸರಿಗೆ ಸಿಂಹ ಸ್ವಪ್ನವಾಗಿದ್ದ ಬಿ.ಜಿ. ಕೃಷ್ಣಮೂರ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಿ.ಜಿ. ಕೃಷ್ಣಮೂರ್ತಿ ಮೂಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬುಕ್ಕಡಿಬೈಲಿನ ನಿವಾಸಿ. ಎರಡು ದಶಕಗಳ ಹಿಂದೆ ಮಲೆನಾಡಿನ ನಕ್ಸಲ್ ಚಳವಳಿ ಸೂತ್ರಧಾರ ಬಿ.ಜಿ. ಕೃಷ್ಣಮೂರ್ತಿಯ ಹೆಸರು ಕೇಳದವರೇ ಇಲ್ಲ. ಶೃಂಗೇರಿ, ಉಡುಪಿ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಭಾಗಗಳ ಪೊಲೀಸರೂ ಕೂಡ ಇದೇ ಕೃಷ್ಣಮೂರ್ತಿಯ ಬೆನ್ನು ಬಿದ್ದಿದ್ದರು.

2000ನೇ ಇಸವಿಯಲ್ಲಿ ಭೂಗತನಾದ ಈ ನಕ್ಸಲ್ ನಾಯಕ
ಹೀಗಿರುವಾಗ 2000ನೇ ಇಸವಿಯಲ್ಲಿ ಭೂಗತನಾದ ಈ ನಕ್ಸಲ್ ನಾಯಕ ಕೇರಳ, ಆಂಧ್ರಪ್ರದೇಶದ ಕಡೆ ಮುಖ ಮಾಡಿದ್ದರು. ಆ ವೇಳೆ ಕೃಷ್ಣಮೂರ್ತಿ ತಲೆಗೆ ಪೊಲೀಸ್ ಇಲಾಖೆ, ಐದು ಲಕ್ಷ ನಗದು ಬಹುಮಾನವೂ ಘೋಷಣೆ ಮಾಡಿತ್ತು. ಆ ನಕ್ಸಲ್ ನಾಯಕನನ್ನು ಕೇರಳ ಪೊಲೀಸರು ಮೂರು ತಿಂಗಳ ಹಿಂದೆಯಷ್ಟೇ ಬಂಧಿಸಿದ್ದರು. ನಕ್ಸಲ್ ಚಳವಳಿ ಸೂತ್ರಧಾರನಾಗಿದ್ದ ಬಿ.ಜಿ. ಕೃಷ್ಣಮೂರ್ತಿಯ ವಿರುದ್ಧ 53 ಪ್ರಕರಣಗಳು ದಾಖಲಾಗಿದೆ.
ಬಿ.ಜಿ. ಕೃಷ್ಣಮೂರ್ತಿ ಬಂಧನದ ಜೊತೆಜೊತೆಗೆ 2001ರಿಂದಲೂ ಭೂಗತರಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸದ ಸಾವಿತ್ರಿ ಬಂಧನ ಕೂಡ ಆಗಿದೆ. ನಕ್ಸಲ್ ನಾಯಕಿ ಸಾವಿತ್ರಿಯನ್ನು ಬಂಧಿಸಿದ ಕೇರಳ ಪೊಲೀಸರು, ಅನೇಕ ಪ್ರಕರಣಗಳ ತನಿಖೆಗೆ ಕಾಫಿನಾಡಿನ ಪೊಲೀಸರಿಗೆ ಕೂಡ ಸಾವಿತ್ರಿ ಬೇಕಾಗಿದ್ದರಿಂದ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಇಬ್ಬರು ಕೂಡ ಬಿಗಿ ಪೊಲೀಸ್ ಬಂದ್ ಬಸ್‌ನಲ್ಲಿ ನ್ಯಾಯಾಲಯಗಳಿಗೆ ಹಾಜರಾಗಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

15ಕ್ಕೂ ಹೆಚ್ಚು ಮಂದಿ ನಕ್ಸಲರು ಶರಣಾಗಿ ಮುಖ್ಯವಾಹಿನಿಗೆ
ಸದ್ಯ ಈ ಇಬ್ಬರ ಬಂಧನದ ಮೂಲಕ ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಬೇರೂರಿದ್ದ ನಕ್ಸಲ್ ಚಟುವಟಿಕೆ ದಿನೇ ದಿನೇ ಕ್ಷೀಣಿಸುತ್ತಿದೆ. ಕಾಡಿನಲ್ಲಿ ಬಂದೂಕು ಹಿಡಿದು ಹೋರಾಟ ನಡೆಸಿದೋರು ನಾಡಿನತ್ತ ಮುಖ ಮಾಡುತ್ತಾ ಇದ್ದಾರೆ. ಸರ್ಕಾರ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಈಗಾಗಲೇ 15ಕ್ಕೂ ಹೆಚ್ಚು ಮಂದಿ ನಕ್ಸಲರು ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ.
2010ರಲ್ಲಿ ವೆಂಕಟೇಶ್, ಜಯಾ, ಸರೋಜ, ಮಲ್ಲಿಕಾ, 2014ರಲ್ಲಿ ಸಿರಿಮನೆ ನಾಗರಾಜ್, ನೂರ್ ಜಲ್ಫಿಕರ್, 2016ರಲ್ಲಿ ಭಾರತಿ, ಫಾತಿಂ, ಪದ್ಮನಾಭ್, ಪರುಶುರಾಮ್, 2017ರಲ್ಲಿ ಕನ್ಯಾಕುಮಾರಿ, ಶಿವು, ಚೆನ್ನಮ್ಮ ಜಿಲ್ಲಾಡಳಿತದ ಮುಂದೆ ಶರಣಾಗತಿಯಾಗಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಪಶ್ವಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯ ಮಂಚೂಣಿ ನಾಯಕರಲ್ಲಿ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಕೂಡ ಇದ್ದರು. ಸದ್ಯ ಇವರಿಬ್ಬರ ಬಂಧನದ ಮೂಲಕ ಮಲೆನಾಡಿನಲ್ಲಿ ನಕ್ಸಲ್ ನೆಲೆಗೆ ಈಗ ಬ್ರೇಕ್ ಬಿದ್ದಂತಾಗಿದೆ.












Click it and Unblock the Notifications