ಶಿವನ ಬೆಂಬಿಡದ ನಂದಿ: ಭದ್ರಾ ನದಿಯ ಒಡಲಿನಲ್ಲಿ ಅಚ್ಚರಿಯ ಘಟನೆ
ಚಿಕ್ಕಮಗಳೂರು, ಜುಲೈ 04: ಈಶ್ವರನನ್ನು ನೋಡುತ್ತಾ ಕುಳಿತಿರುವ ನಂದಿ. ಈ ದೃಶ್ಯ ಕಂಡು ಬಂದಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಗ್ಗನಳ್ಳ ಸಮೀಪವಿರುವ ಭದ್ರಾ ನದಿಯಲ್ಲಿ.
ಈ ಮೂರ್ತಿಗಳು ಮಳೆಯಲ್ಲಿ ಕೊಚ್ಚಿ ಬಂದು ಭದ್ರೆಯ ಒಡಲಲ್ಲಿ ಹೀಗೆ ನದಿ ಮಧ್ಯೆ ಕುಳಿತಿವೆ. ಹಿಂದೂಗಳ ನಂಬಿಕೆಯಲ್ಲಿ ಎಲ್ಲೇ ಈಶ್ವರನ ದೇವಾಲಯವಿದ್ದರೂ ಅವನನ್ನು ನೋಡುತ್ತಲೇ ನಂದಿಯ ವಿಗ್ರಹ ಇರುತ್ತದೆ. ಇಲ್ಲೂ ಅದೇ ರೀತಿ ಇದೆ. ಭದ್ರೆಯ ಅಬ್ಬರದ ಮಧ್ಯೆ ಕೊಚ್ಚಿಕೊಂಡು ಬಂದರೂ ನದಿಯೊಳಗೆ ಈಶ್ವರ ಹಾಗೂ ನಂದಿಯ ವಿಗ್ರಹಗಳು ದೇವಾಲಯದಲ್ಲಿರುವಂತೆ ಕಂಡು ಬಂದಿದೆ.

ಈ ಶಿವ ನಂದಿಯ ವಿಗ್ರಹಗಳನ್ನು ನೋಡಿ ಭಕ್ತರ ನಂಬಿಕ ಮತ್ತಷ್ಟು ಹೆಚ್ಚಿದ್ದು, ಇದನ್ನು ಕಣ್ಣಾರೆ ಕಂಡ ಆಸ್ತಿಕರು ಇದು ದೈವದ ಶಕ್ತಿ. ನಾವು ಈವರೆಗೂ ಈ ರೀತಿಯ ಅಚ್ಚರಿಯನ್ನು ಕಂಡೇ ಇಲ್ಲ ಎಂದಿದ್ದಾರೆ.
ಈ ಮೂರ್ತಿಗಳು ಎಲ್ಲಿಂದ ಕೊಚ್ಚಿ ಬಂದವೋ ಗೊತ್ತಿಲ್ಲ. ಈ ಬಾರಿ ಜುಲೈ ಬಂದರೂ ಮಳೆಯ ಸೂಚನೆ ಇಲ್ಲದಿರುವುದರಿಂದ ಭದ್ರೆಯ ಒಡಲು ಬರೀದಾಗಿದೆ. ಈಗ ಭದ್ರಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಬಹುತೇಕ ಕಡಿಮೆಯಾದ ಮೇಲೆ ಈಗ ಮೂರ್ತಿಗಳು ನೋಡಲು ಕಾಣಸಿಗುತ್ತಿವೆ.
ಈ ಅಚ್ಚರಿಯನ್ನು ಕಣ್ಣಾರೆ ಕಂಡ ಪ್ರವಾಸಿಗರು, ಸ್ಥಳೀಯರು ಹಾಗೂ ಆಸ್ತಿಕರು ಇದು ದೇವರು ಇರುವಿಕೆಗೆ ಸಾಕ್ಷಿ ಎಂದಿದ್ದಾರೆ. ಇಲ್ಲಿರುವ ಮೂರ್ನಾಲ್ಕು ವಿಗ್ರಹಗಳನ್ನು ಕಂಡರೆ ಇದು ಯಾವುದೋ ದೇವಸ್ಥಾನ ಅಥವಾ ಅರಣ್ಯದ ಮಧ್ಯೆ ಇರುವ ದೇವರ ಮೂರ್ತಿಗಳು 2018ರಿಂದ 2021ರವರಗೆ ಮಲೆನಾಡಲ್ಲಿ ಸುರಿದ ಭಾರೀ ಮಳೆಯಿಂದ ಕೊಚ್ಚಿಕೊಂಡು ಬಂದಿವೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.

ಸದ್ಯ ರಾಜ್ಯ ಸರ್ಕಾರ ಈ ಮೂರ್ತಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಪೂಜೆಗೆ ವ್ಯವಸ್ಥೆ ಮಾಡುಬೇಕು ಎಂದು ಸ್ಥಳೀಯರು ಹಾಗೂ ಪ್ರವಾಸಿಗರು ಆಗ್ರಹಿಸಿದ್ದಾರೆ.
ಒಟ್ಟಾರೆ, ಇದು ದೇವರ ಸತ್ಯವೋ ಅಥವಾ ನದಿಯಲ್ಲಿ ಕೊಚ್ಚಿ ಬಂದ ಈಶ್ವರ-ನಂದಿ ಅಚಾನಕ್ಕಾಗಿ ಹೀಗೆ ಕೂತಿದ್ದಾರೋ ಇಲ್ಲ ಯಾರಾದರೂ ಹೀಗೆ ನಿಲ್ಲಿಸಿದ್ದಾರೋ ಗೊತ್ತಿಲ್ಲ. ಆದರೆ ಭದ್ರಾ ನದಿಯ ಮಧ್ಯೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದಂತೆಯೇ ವಿಗ್ರಹಗಳು ಇರುವುದುನಿಜಕ್ಕೂ ಆಶ್ಚರ್ಯ ಮೂಡಿಸುವಂತಿದೆ. ಆದರೆ ನದಿ ಮಧ್ಯೆ ಈಶ್ವರ-ನಂದಿ ಇರುವ ರೀತಿ ಕಂಡು ಭಕ್ತರು ಉಘೇ ಶಂಕರ ಎನ್ನುತ್ತಿದ್ದಾರೆ.












Click it and Unblock the Notifications