ಮೂಡಿಗೆರೆ: ಕಿತ್ತೋಗಿರೋ ರಸ್ತೆ ಮಧ್ಯದಲ್ಲಿ ಕೃಷಿ ಕಾರ್ಯ, ಮೀನುಗಾರಿಕೆ, ಇದೊಂದ್ ವಿನೂತನ ಪ್ರತಿಭಟನೆ
ಚಿಕ್ಕಮಗಳೂರು, ಆಗಸ್ಟ್, 28: ಗುಂಡಿಮಯವಾದ ಮಂಗಳೂರು-ಕಡೂರು-ಮೂಡಿಗೆರೆ-ಬೇಲೂರು-ಚಿಕ್ಕಮಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ರಸ್ತೆಯಲ್ಲಿ ಕೃಷಿ ಕಾರ್ಯ ಹಾಗೂ ಮೀನುಗಾರಿಕೆ ಆರಂಭಿಸಿ ವಿನೂತನ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಮೂಡಿಗೆರೆ ಪಟ್ಟಣದಲ್ಲಿ ಬಳಿಯಿರುವ ಹೆದ್ದಾರಿ ಮಧ್ಯದಲ್ಲಿ ಗುಂಡಿ ಬಿದ್ದಿರುವ ಜಾಗದಲ್ಲಿ ಸಚೇತನ ಯುವಕರ ತಂಡದವರು ಸಿಲ್ವರ್ ಗಿಡಗಳನ್ನಿಟ್ಟು ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಭಟನಾಕಾರರು ಗುಂಡಿಗೆ ಮೀನು ಬಿಟ್ಟು, ಮೀನು ಹಿಡಿದು ವ್ಯಾಪಾರಕ್ಕೂ ಮುಂದಾಗಿದ್ದಾರೆ.

ಹೀಗೆ ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ದುರಸ್ತಿಗೆ ಸೂಕ್ತ ಕ್ರಮವಹಿಸದ ಹಿನ್ನೆಲೆ ಸಚೇತನ ಯುವಕರ ತಂಡದವರು ವಿನೂತನ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಊರು ಬಿಡುತ್ತಿರುವ ಜನ
ನಿತ್ಯ ನೂರಾರು ಜನರಿಗೆ ಅನ್ನ ಹಾಕುತ್ತಿದ್ದ ಜಿಲ್ಲೆಯ ಮಲೆನಾಡ ಪುರಾತನ ಮನೆಗಳು ಪಾಳುಬಿದ್ದು ಲೂಟಿಹೊಡೆದ ಕೋಟೆಯಂತಾಗಿವೆ. ಹೀಗೆ ಜಿಲ್ಲೆಯಲ್ಲಿ ಅಡಿಕೆಗೆ ತಗುಲಿರುವ ಹಳದಿ ಎಲೆ ರೋಗವನ್ನು ನಿಯಂತ್ರಿಸಲಾಗದೆ ಮಲೆನಾಡಿನ ನೂರಾರು ಜನ ಬದುಕಿ-ಬಾಳಿದ್ದ ಮನೆಗಳನ್ನು ಬಿಟ್ಟು ಊರುಗಳನ್ನೇ ಬಿಡುತ್ತಿದ್ದಾರೆ.
ನೂರಾರು ಜನ ಊರು ಬಿಟ್ಟಿದ್ದರೆ, ಮತ್ತೆ ಕೆಲವರು ತೋಟಗಳತ್ತ ಮುಖ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ. ಅನಾದಿ ಕಾಲದಿಂದಲೂ ಬದುಕಿ ಬಾಳಿದ್ದ ಮನೆಗಳು ಈಗ ಖಾಲಿ-ಖಾಲಿ. ತುತ್ತಿನ ಚೀಲಕ್ಕಾಗಿ ಸಾಲ ಮಾಡುವುದಲ್ಲದೆ, ಗುಳೇ ಹೋಗುತ್ತಿದ್ದಾರೆ. ಇದೀಗ ದೇವರ ಫೋಟೋಗಳು, ಮಕ್ಕಳು ಓದಿದ ಪುಸ್ತಕಗಳು, ಅಡಿಗೆ ಪಾತ್ರೆಗಳು, ಪಾಳು ಬಿದ್ದ ರೈತನ ಮನೆಯ ನೆನಪಾಗಿ ಉಳಿದಿವೆ.
ಐದು ದಶಕಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಳದಿ ಎಲೆ ರೋಗ ಬೆಳೆಗಾರರಿಗೆ ಕೃಷಿ ಬಗ್ಗೆಯೇ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ಕಿವಿಗೆ ಬಿದ್ದ ಔಷಧಿಯನ್ನೆಲ್ಲಾ ಸಿಂಪಡಿಸಿದರೂ ರೈತರ ಜೇಬು ಬರಿದಾಗುತ್ತಿದೆಯೇ ವಿನಃ ರೋಗ ನಿಯಂತ್ರಣಕ್ಕೆ ಬಾರಲೇ ಇಲ್ಲ. ಶೃಂಗೇರಿ-ಕೊಪ್ಪ-ಎನ್.ಆರ್.ಪುರ ತಾಲೂಕಿನ ಹಲವು ಭಾಗದಲ್ಲಿ ಹಳದಿ ಎಲೆ ಹಾಗೂ ಎಲೆಚುಕ್ಕಿ ರೋಗ ಹೀಗೆ ಪಾರುಪತ್ಯ ಮರೆಯುತ್ತಿದೆ.
ಸಂಶೋಧನ ಕೇಂದ್ರಕ್ಕೆ ಔಷಧಿ ಸಂಶೋಧನೆಗೆಂದು ಬಂದ ಕೋಟಿಗಟ್ಟಲೇ ಹಣವನ್ನು ಹಳದಿ ಎಲೆ ರೋಗವೇ ತಿಂದಾಕಿದೆ. ಬ್ಯಾಂಕ್ ಸಾಲದ ಜೊತೆ ಅಡವಿಟ್ಟ ಹೆಂಡತಿ ಮಕ್ಕಳ ಓಡವೆಯನ್ನ ಬಿಡಿಸುವುದಕ್ಲೂ ಆಗದ ಸಂದಿಗ್ಧ ಪರಿಸ್ಥಿತಿಗೆ ಬೆಳೆಗಾರರು ಬಂದಿದ್ದಾರೆ. ಹಾಗಾಗಿ, ಸಾಲದ ಶೂಲಕ್ಕೆ ಸಿಕ್ಕ ಬೆಳೆಗಾರರು ಹೊರಬರಲಾಗದೆ ಬದುಕುವ ಅನಿವಾರ್ಯತೆಗೆ ಊರುಬಿಟ್ಟು ಸಿಕ್ಕ-ಸಿಕ್ಕ ಕೆಲಸವನ್ನು ಮಾಡುತ್ತಿದ್ದಾರೆ.












Click it and Unblock the Notifications