ಭಾಷಣದಲ್ಲಿ ತಾಕತ್ ತೋರಿಸುವುದಲ್ಲ: ಎಚ್.ಎಂ.ವಿಶ್ವನಾಥ್ ವಿರುದ್ಧ ಪ್ರಜ್ವಲ್ ರೇವಣ್ಣ ಕಿಡಿ
ಹಾಸನ, ಡಿಸೆಂಬರ್ 9: ಶಾಸಕ ಎಚ್.ಕೆ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ.
ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿಗೆ ಗೌರವ ಕೊಡಲಿಲ್ಲ ಎಂದ ಮೇಲೆ ಎಚ್.ಎಂ.ವಿಶ್ವನಾಥ್ ಯಾವುದೇ ಸಭೆಗೆ ಬರಲು ಲಾಯಕ್ ಇಲ್ಲ. ನಾನು ಒಳ್ಳೆಯತನದಲ್ಲಿ ಅವರಿಗೆ ಒಂದು ಮಾತು ಹೇಳುತ್ತೇನೆ. ಕಾಡಾನೆಗಳ ಸಮಸ್ಯೆ ಇರುವುದು ನಿಜ, ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಹೋರಾಟದಲ್ಲಿ ಪಕ್ಷ ಮತ್ತು ರಾಜಕೀಯ ಬೆರೆಸುವುದಕ್ಕೆ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ.
ಕಾಡಾನೆಗಳ ಸಮಸ್ಯೆ ಬಗ್ಗೆ ಪಕ್ಷಾತೀತವಾಗಿ ಹೋರಾಟ ಮಾಡೋಣ ಎಂದಿದ್ದೇನೆ. ಇದು ದೊಡ್ಡ ಗುಣ. ಚಿಕ್ಕವರಿಂದ ಏನನ್ನು ಕಲಿಯುವುದಿಲ್ಲ, ದೊಡ್ಡವರಿಂದ ಬಹಳಷ್ಟು ಕಲಿತಿದ್ದೇವೆ. ದೇವೇಗೌಡರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ. ನಾವು ಎಲ್ಲಾ ಪಕ್ಷದವರಿಗೂ ಗೌರವ ಕೊಡುತ್ತೇವೆ. ಎಚ್.ಎಂ.ವಿಶ್ವನಾಥ್ ನಮ್ಮ ಜೊತೆ ಹೋರಾಟಕ್ಕೆ ಬಂದರೆ ಖುಷಿ ಎಂದು ಹೇಳಿದರು.

ಇನ್ನು ಎಲ್ಲರೂ ವೇದಿಕೆಗೆ ಹೋದಾಗ ತಮ್ಮ ಬಾಯಿಯನ್ನು ಹದ್ದುಬಸ್ತ್‌ನಲ್ಲಿ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇದನ್ನು ಅನುಸರಿಸಿ ಎಂದು ಕಿವಿಮಾತು ಹೇಳುತ್ತೇನೆ. ಇವತ್ತು ಎಚ್.ಎಂ.ವಿಶ್ವನಾಥ್ ಯಾವ ಪಕ್ಷದಲ್ಲಿ ಇದ್ದಾರೆ. ನನ್ನ ಪ್ರಕಾರ ಬಿಜೆಪಿಯಲ್ಲಿ ಇದ್ದಾರೆ ಎಂದುಕೊಳ್ಳುತ್ತೇನೆ. ಎಂಎಲ್‌ಸಿ ಚುನಾವಣೆಗೆ ನಿಂತಿದ್ದರು. ಆಮೇಲೆ ಬೇಸರವಾಗಿ ಎಲ್ಲಾದರೂ ಹೋಗಿದ್ದಾರೆ, ಅದರ ಬಗ್ಗೆ ಗೊತ್ತಿಲ್ಲ. ಅವರಿಗೆ ಆಮ್ ಆದ್ಮಿ ಒಂದು ಖಾಲಿಯಿದೆ, ಅವಕಾಶವಿದೆ ಎಂದು ವ್ಯಂಗ್ಯವಾಡಿದರು.
ಇನ್ನು ಎಚ್.ಎಂ.ವಿಶ್ವನಾಥ್ ಏನಾದರೂ ನ್ಯಾಯಬದ್ಧವಾಗಿ ಬಿಜೆಪಿಯಲ್ಲಿ ಇದ್ದರೆ, ರಾಜ್ಯ ಹಾಗೂ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಳಿ ಹೋಗಿ ಹೋರಾಟ ಮಾಡಲಿ. ಇಲ್ಲಿ ಬಂದು ಭಾಷಣದಲ್ಲಿ ತಾಕತ್ ತೋರಿಸುವುದಲ್ಲ. ಅವರದ್ದೇ ಸರ್ಕಾರ ಇಟ್ಟುಕೊಂಡು ಹೋರಾಟ ಯಾರ ಮೇಲೆ ಮಾಡುತ್ತಾರೆ..? ಎಚ್.ಎಂ.ವಿಶ್ವನಾಥ್ ಹಿರಿಯರಿದ್ದಾರೆ, ದಯವಿಟ್ಟು ಇಂತಹದನ್ನು ತಿದ್ದಿಕೊಳ್ಳಬೇಕು. ಇನ್ನು ಮುಂದೆಯಾದರೂ ಚಿಕ್ಕವಯಸ್ಸಿನವರ ತರ ಆಡುವುದನ್ನು ಬಿಟ್ಟು, ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ. ಅವರು ಮಾಜಿ ಶಾಸಕರು ಜವಾಬ್ದಾರಿಯಿಂದ ಮಾತನಾಡಲಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.












Click it and Unblock the Notifications