ಕುಮಾರಸ್ವಾಮಿ ಅವರದ್ದು ಮನೆ,ಊರು ದಾಟಿದ ಸಾಮರ್ಥ್ಯ- ಶಾಸಕ ಸಿ.ಟಿ ರವಿ ಲೇವಡಿ
ನಮಗೆ ಕುಮಾರಸ್ವಾಮಿಯಷ್ಟು ಸಾಮರ್ಥ್ಯ ಇಲ್ಲ. ಅವರ ಸಾಮರ್ಥ್ಯಕ್ಕೆ ನಾವು ಶರಣು ಶರಣಾರ್ಥಿ ಎಂದು ಶಾಸಕ ಸಿ.ಟಿ.ರವಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ 7: ನಮಗೆ ಕುಮಾರಸ್ವಾಮಿಯಷ್ಟು ಸಾಮರ್ಥ್ಯ ಇಲ್ಲ ಎನ್ನುವುದನ್ನು ನಾವು ಮೊದಲೇ ಒಪ್ಪಿಕೊಂಡಿದ್ದೇವೆ. ನಮ್ಮದ್ದು ಸೀಮಿತ ಚೌಕಟ್ಟಿನ ಸಾಮರ್ಥ್ಯ, ಅವರ ಸಾಮರ್ಥ್ಯಕ್ಕೆ ನಾವು ಶರಣು ಶರಣಾರ್ಥಿ ಎಂದು ಶಾಸಕ ಸಿ.ಟಿ.ರವಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯ ಬಿಜೆಪಿ ನಪುಂಸಕ ಸರ್ಕಾರ ಎಂದಿರುವ ಜೆಡಿಎಸ್ ಟ್ವೀಟ್ ವಿರುದ್ಧ ಕಿಡಿಕಾರಿದ್ದಾರೆ. ನಮ್ಮದು ಮನೆಯೊಳಗಿನ ಸಾಮರ್ಥ್ಯ, ಅವರದ್ದು ಮನೆ-ಊರು ದಾಟಿದ ಸಾಮರ್ಥ್ಯ, ನಮಗೆ ಅಷ್ಟು ಸಾಮರ್ಥ್ಯ ಇಲ್ಲ. ಅವರು ವೈಯಕ್ತಿಕವಾಗಿ ಹೇಳಿದ್ದಾರೋ ಅಥವಾ ರಾಜಕೀಯವಾಗಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ರಾಜಕೀಯವಾಗಿ ಹೇಳಿದ್ದರೆ ಬಿಜೆಪಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡುತ್ತಲೇ ಬಂದಿದೆ ಎಂದರು.
ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಜೆಡಿಎಸ್ ಭದ್ರಕೋಟೆಯಲ್ಲೇ ನೂರಾರು ಕೋಟಿ ಖರ್ಚು ಮಾಡಿದರೂ ತನ್ನ ಮಗನನ್ನು ಗೆಲ್ಲಿಸಲು ಆಗಲಿಲ್ಲ. ದೇವೇಗೌಡರು ಹಿರಿಯರು, ಅವರ ಬಗ್ಗೆ ಅಪಾರ ಗೌರವವಿದೆ. ಪ್ರಧಾನಿಯಾಗಿದ್ದವರು. ಆದರೆ, ಇಳಿವಯಸ್ಸಿನಲ್ಲಿ ಕಾಂಗ್ರೆಸ್-ಜೆಡಿಎಸ್ ಇಬ್ಬರೂ ಸೇರಿ ಗೆಲ್ಲಿಸಲು ಆಗಲಿಲ್ಲ ಅವರಿಗೆ ಏನು ಹೇಳಬೇಕು ಎಂದರು. ಒಂದು ವೇಳೆ, ಕುಮಾರಸ್ವಾಮಿ, ರಾಜಕೀಯವಾಗಿ ಆ ಮಾತನ್ನು ಹೇಳಿದ್ದರೆ, ಬಿಜೆಪಿ 25 ಪ್ಲಸ್ 1 ಒಟ್ಟು 26 ಸೀಟು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯ ತೋರಿಸಿದೆ. ವೈಯಕ್ತಿಕವಾಗಿ ನಮಗೆ ಅವರಷ್ಟು ಸಾಮರ್ಥ್ಯ ಇಲ್ಲ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿಯಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಮಾನ್ಯ ಕಾರ್ಯಕರ್ತ ಕೂಡ ಸಿಎಂ ಆಗಬಹುದು. ಆದರೆ, ಜೆಡಿಎಸ್‍ನಲ್ಲಿ ಇದು ಸಾಧ್ಯವಾ ಎಂದು ಶಾಸಕ ಸಿ.ಟಿ.ರವಿ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಮಾತು ಮುಂದುವರಿಸಿದ ಅವರು, ಹಾಸನ ಜಗಳ ನಿಮಗೆ ಗೊತ್ತೇ ಇದೆ. ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತರು ಅಂದರೆ ಯಾರು...? ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿಯೇ ಸಾಮಾನ್ಯ ಕಾರ್ಯಕರ್ತರು ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಯಾವ ಸ್ಥಾನಕ್ಕೆ ಬೇಕಾದರೂ ಏರಬಹುದು. ಅದಕ್ಕೆ ಉದಾಹರಣೆ ನಾನೇ. ನಾನು ಪೋಸ್ಟರ್ ಹೊಡೆದು, ಮೈಕ್ ಅನೌನ್ಸ್ ಮಾಡಿ ಫ್ಲಾಗ್ ಕಟ್ಟಿದ್ದೇನೆ. ಅದಕ್ಕೆ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದೇನೆ. ನಾವು ಯಾವದೇ ದೊಡ್ಡ ರಾಜಕೀಯ ಹಿನ್ನೆಲೆಯವರಲ್ಲ, ಅದೇ ರೀತಿ ಪ್ರಹ್ಲಾದ್ ಜೋಶಿಯವರು ಕೂಡ, ನಮ್ಮ ಪ್ರಧಾನಿ ಕೂಡ. ಪ್ರಧಾನಿ ಮೋದಿಯವರು ಒಂದು ಕಾಲದ ಸಾಮಾನ್ಯ ಕಾರ್ಯಕರ್ತ. ಇಂದು ಇವತ್ತು ಪರಿಶ್ರಮ ಹಾಕುವ ಮಾದರಿ ಕಾರ್ಯಕರ್ತ ಎಂದು ಹೇಳಿದ್ದಾರೆ.












Click it and Unblock the Notifications