ಮಳೆಗಾಗಿ ಶೃಂಗೇರಿಯಲ್ಲಿ ಡಿಕೆಶಿ ಪ್ರಾರ್ಥನೆ, ಗುರುವಾರ ಕಿಗ್ಗಾದಲ್ಲಿ ಹೋಮ
ಚಿಕ್ಕಮಗಳೂರು, ಜೂನ್ 5: ಮಳೆಗಾಗಿ ಗುರುವಾರ ವಿಶೇಷ ಪೂಜೆ ಸಲ್ಲಿಸುವ ಹಿನ್ನೆಲೆಯಲ್ಲಿ ಶೃಂಗೇರಿಗೆ ಬಂದ ಸಚಿವ ಡಿ.ಕೆ.ಶಿವಕುಮಾರ್ ಅವರು ಬುಧವಾರ ಶಾರದಾಂಬೆ ದರ್ಶನ ಪಡೆದರು. ರಾಜ್ಯದಲ್ಲಿ ಉತ್ತಮವಾಗಿ ಮಳೆ ಆಗಲಿ ಎಂದು ಶಾರದಾಂಬೆಗೆ ವಿಶೇಷವಾದ ಪೂಜೆ ಸಲ್ಲಿಸಿದರು. ಗುರುವಾರದಂದು ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಕಿಗ್ಗಾದಲ್ಲಿ ನಡೆಯುವ ಪರ್ಜನ್ಯ ಹೋಮದಲ್ಲಿ ಭಾಗಿ ಆಗಲಿರುವ ಶಿವಕುಮಾರ್ ಅವರಿಗೆ ಪಿ.ಟಿ.ಪರಮೇಶ್ವರ್ ನಾಯ್ಕ ಸಾಥ್ ನೀಡಲಿದ್ದಾರೆ. ಜತೆಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಕೂಡ ಇರಲಿದ್ದಾರೆ. ಶಾರದಾಂಬೆ ದರ್ಶನ ಪಡೆದ ನಂತರ ಸಚಿವ ಶಿವಕುಮಾರ್ ಅವರು ಗುರುಗಳ ದರ್ಶನ ಪಡೆದರು.
ನರಸಿಂಹವನದಲ್ಲಿರುವ ಗುರುಗಳ ನಿವಾಸದಲ್ಲಿ ಭಾರತೀ ತೀರ್ಥ ಹಾಗೂ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದರು ಶಿವಕುಮಾರ್. ಬುಧವಾರ ರಾತ್ರಿ ಮಠದಲ್ಲೇ ವಾಸ್ತವ್ಯ ಹೂಡಲಿರುವ ಅವರು, ಗುರುವಾರ ಬೆಳಗ್ಗೆ ಕಿಗ್ಗಾದಲ್ಲಿ ನಡೆಯುವ ಪರ್ಜನ್ಯ ಜಪ ಹಾಗೂ ಹೋಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀಗಳ ದರ್ಶನದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಭೀಕರ ಬರ ಇದೆ. ಭಕ್ತಿ ಇದ್ದಲ್ಲಿ ಭಗವಂತ, ಮನಸ್ಸಿದ್ದಲ್ಲಿ ಮಾರ್ಗ. ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ- ಬೆಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿ, ಋಷ್ಯಶೃಂಗನ ಬಳಿ ಪರ್ಜನ್ಯ ಜಪ ಮಾಡಲಿದ್ದೇವೆ ಎಂದರು.
ಋಷ್ಯಶೃಂಗ ದೇವಾಲಯಕ್ಕೆ ನೂರಾರು ವರ್ಷದ ಇತಿಹಾಸವಿದೆ. ನಾನು ದೇವರನ್ನು ನಂಬಿದ್ದೇನೆ. ಮಳೆಗಾಗಿ ಶೃಂಗೇರಿ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications